ಮುಖ್ಯಮಂತ್ರಿಗೆ ಶಿವಯ್ಯ ಸ್ವಾಮಿ ಮನವಿ ಪತ್ರ
ಬೀದರ್ ಅಭಿವೃದ್ಧಿಗೆ ಸರ್ಕಾರಕ್ಕೆ 26 ಪ್ರಸ್ತಾವ
ಬೀದರ್: ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ 26 ಪ್ರಸ್ತಾವ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವಗಳ ಮನವಿ ಪತ್ರ ಸಲ್ಲಿಸಿದರು.
ಕಾರಂಜಾ ನೀರಾವರಿ ಯೋಜನೆಯ ಸಂತ್ರಸ್ತರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಬಾಕಿ ಹಣ ಪಾವತಿಸಬೇಕು. ಕಾರ್ಖಾನೆಗಳಿಗೆ ಮೂಲಸೌಕರ್ಯಕ್ಕೆ ಅನುದಾನ ಕಲ್ಪಿಸಬೇಕು. ಬೀದರ್ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಹೆಸರಿಟ್ಟು, ವಿಸ್ತರಣಾ ಘಟಕ, ವಿಶೇಷ ಕೇಂದ್ರ ಹಾಗೂ ಮೂಲಸೌಕರ್ಯಕ್ಕಾಗಿ ವಿಶ್ವವಿದ್ಯಾಲಯಕ್ಕೆ ರೂ. 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಬಾರದು. ರಾಜ್ಯ, ಕೇಂದ್ರ ಸರ್ಕಾರದಿಂದ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಬೇಕು. ಬೀದರ್‍ನಲ್ಲಿ ಬಿದ್ರಿ ಕಲೆ ಅಭಿವೃದ್ಧಿ ಕ್ಲಸ್ಟರ್, ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪಿಸಬೇಕು. ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಮುಚ್ಚಿರುವ ಕಾರ್ಖಾನೆಗಳನ್ನು ಪುನಃರಾರಂಭಿಸಬೇಕು. ಹೊಸ ಉದ್ಯಮ ಸ್ಥಾಪಿಸುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಜಿಲ್ಲೆಯ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕಲ್ಪಿಸಬೇಕು. ಕೇಂದ್ರಕ್ಕೂ ವಿಶೇಷ ಪ್ರಸ್ತಾವ ಸಲ್ಲಿಸಬೇಕು. ಉಡಾನ್ ಯೋಜನೆಯಡಿ ಬೆಂಗಳೂರಿಗೆ ರಾತ್ರಿ ವೇಳೆಯೂ ವಿಮಾನಯಾನ ಸೌಕರ್ಯ ಒದಗಿಸಬೇಕು. ಹೈದರಾಬಾದ್- ನಿಜಾಮೊದ್ದೀನ್ ಹಾಗೂ ಸಿಂಕದರಾಬಾದ್- ವಾರಾಣಸಿ-ದಾನಾಪುರ ರೈಲುಗಳನ್ನು ಬೀದರ್ ವರೆಗೆ ವಿಸ್ತರಿಸಬೇಕು. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಸಮುದಾಯ ಸಂಸ್ಥೆಗಳಿಗೆ 200 ಹೆಚ್ಚುವರಿ ರೇಷನ್ ಅಂಗಡಿಗಳನ್ನು ಮಂಜೂರು ಮಾಡಬೇಕು. ಸ್ಟಾರ್ಟಪ್ ಇಂಡಿಯಾ ಕರ್ನಾಟಕ ಎಲಿವೇಟ್‍ನಲ್ಲಿ ಆಯ್ಕೆಯಾಗಿರುವ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೆಟಲ್ ಮಾರ್ಕ್ ಲೇಸರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‍ಗೆ ರೂ. 10 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆ ಅನ್ವಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಬೀದರ್ ಸೇರಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು. ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆಗಳ ಮಂಜೂರಾತಿಗಾಗಿ ದೆಹಲಿಗೆ ನಿಯೋಗ ಒಯ್ಯಬೇಕು. ಕೇಂದ್ರದಿಂದ ಬಿಡುಗಡೆಯಾಗುವ ಅನುದಾನ ತ್ವರಿತವಾಗಿ ಬಿಡುಗಡೆ ಆಗುವಂತೆ ನೋಡಿಕೊಳ್ಳಲು ಪ್ರತ್ಯೇಕ ಫಾಲೋ ಅಪ್ ಘಟಕ ರಚಿಸಬೇಕು ಎಂಬಿತ್ಯಾದಿ ಪ್ರಸ್ತಾವಗಳನ್ನು ಮುಖ್ಯಮಂತ್ರಿ ಅವರ ಮುಂದಿರಿಸಿದರು.
ಮುಖ್ಯಮಂತ್ರಿ ಅವರು ತಮ್ಮ ಪ್ರಸ್ತಾವಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಿವಯ್ಯ ಸ್ವಾಮಿ ಹೇಳಿದರು.
———————