Saturday, May 24, 2025
HomePopularಮುಂಗಾರು ಕೃಷಿ: ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಳ್ಳಿ-ಉಸ್ತುವಾರಿ ಕಾರ್ಯದರ್ಶಿ.ಡಿ.ರಂದೀಪ

ಮುಂಗಾರು ಕೃಷಿ: ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಳ್ಳಿ-ಉಸ್ತುವಾರಿ ಕಾರ್ಯದರ್ಶಿ.ಡಿ.ರಂದೀಪ

ಮುಂಗಾರು ಕೃಷಿ: ಬೀಜ, ಗೊಬ್ಬರ ಕೊರತೆಯಾಗದಂತೆ
ಕ್ರಮಕೈಗೊಳ್ಳಿ-ಉಸ್ತುವಾರಿ ಕಾರ್ಯದರ್ಶಿ.ಡಿ.ರಂದೀಪ
ಬೀದರ್ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಿ.ರಂದೀಪ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಪ್ರಮುಖ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭಗೊಳ್ಳುವ ಸಾಧ್ಯತೆಯಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ ಹಾಗೂ ರಸಗೊಬ್ಬರಗಳನ್ನು ಒದಗಿಸಬೇಕು. ಬೀಜ ವಿತರಣೆಗೆ ಸೂಕ್ತ ಕೇಂದ್ರಗಳನ್ನು ಗುರುತಿಸಿ ಗದ್ದಲ ಆಗದಂತೆ ಕ್ರಮ ವಹಿಸಬೇಕೆಂದು ಕಾರ್ಯದರ್ಶಿಗಳು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳು ಬಜೇಟ್‍ನಲ್ಲಿ ಘೋಷಿಸಿರುವ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಆದ್ಯತೆ ನೀಡಿ ಕ್ರಮ ವಹಿಸಬೇಕೆಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಅಲ್ಪಸಂಖ್ಯಾತರ, ವಿವಿಧ ನಿಗಮಗಳ ವಸತಿ ನಿಲಯಗಳಿಗೆ ಹಾಗೂ ಇತರೇ ಇಲಾಖೆಗಳ ಕಾರ್ಯಕ್ರಮವನ್ನು ಕಟ್ಟಡಗಳ ನಿರ್ಮಾಣಕ್ಕೆ ನಿವೇಶನಗಳನ್ನು ಆದ್ಯತೆ ಮೇರೆಗೆ ಗುರುತಿಸಿ ಕ್ರಮ ವಹಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ ತಾವು ಹಾಗೂ ಜಿಲ್ಲಾ ಪಂಚಾಯತ ಸಿಇಓ ಅವರು ಈಗಾಗಲೇ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದರು. ಕೃಷಿ ಹಾಗೂ ತೋಟಗಾರಿಕೆ ಹಾನಿಯನ್ನು ವರದಿ ಮಾಡಲಾಗಿದೆಯೆಂದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಜಿಲ್ಲೆಗೆ ಸೋಯಾ ಅವರೆ ಹೆಚ್ಚು ಬೇಡಿಕೆ ಇದ್ದು ಉಳಿದಂತೆ ತೊಗರಿ, ಉದ್ದು, ಹೆಸರು, ಜೋಳ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಧ್ಯ 76120 ಕ್ವಿ.ಬೀಜ ಬೇಡಿಕೆಯಿದ್ದು ಈಗಾಗಲೇ ವಿವಿಧ ಬೀಜ ಸಂಸ್ಥೆಗಳಿಗೆ ಇಂಡೆಂಟ್ ನೀಡಲಾಗಿದ್ದು, ಮೇ.15 ರೊಳಗಾಗಿ ದಸ್ತಾನುಕರಿಸಲಾಗುವುದೆಂದರು. ಒಟ್ಟು 4.21 ಲಕ್ಷ ಹೆಕ್ಟರ್ ಬಿತ್ತನೆ ಗುರಿಯಿದ್ದು, ಈ ಪೈಕಿ 2.22 ಲಕ್ಷ ಹೆಕ್ಟರ್ ಸೋಯಾ ಅವರೆ ಹಾಗೂ 1.33 ಲಕ್ಷ ಹೆಕ್ಟರ್ ತೊಗರಿ ಬೆಳೆಯಾಗಿರುತ್ತವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ. ಅಲ್ಲದೆ 115 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಒಟ್ಟು 37.106 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ರಸಗೊಬ್ಬರ ಸಮಸ್ಯೆ ಇಲ್ಲವೆಂದು ತಿಳಿಸಿದರು. ಅರಣ್ಯಿಕರಣ: ಮುಂಗಾರಿನಲ್ಲಿ ಒಟ್ಟು 150 ಸೆ.ಮಿ. ರಸ್ತೆ ಬದಿ, 50 ಕಿ.ಮೀ. ನಗರ ಹಸರೀಕರಣ, 330 ಬ್ಲಾಕ್ ಪ್ಲಾಂಟೇಶನ್ ಮಾಡಲಾಗುವುದು. ರೈತರಿಗೆ ಜಮೀನುಗಳಲ್ಲಿ ಬೆಳೆಸಲು ರಿಯಾಯಿತಿ ದರದಲ್ಲಿ ಸಸಿ ವಿತರಿಸಲಾಗುವುದೆಂದು ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ತಿಳಿಸಿದರು.
ರೈತರಿಗೆ ಕಳೆದ ಬಾರಿಯ ಬೆಳೆ ಪರಿಹಾರ ವಿತರಣೆಯಾಗಿದೆ. 2023-24ನೇ ಸಾಲಿನಲ್ಲಿ 75 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. 2021-22ನೇ ಸಾಲಿನ 13 ರೈತರು ಆತ್ಮಹತ್ಯೆ ಪರಿಹಾರ ಕೆಲ ತಾಂತ್ರಿಕ ಅಂಶಗಳಿಂದಾಗಿ ಬಾಕಿಯಿದ್ದು, ಈಗಾಗಲೇ ವರದಿ ಕಳುಹಿಸಲಾಗಿದೆಯೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.
ಕಳೆದ ಸಾಲಿನಲ್ಲಿ 24 ಜಾನುವಾರು ಜೀವ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 18 ಕೋಟಿ ಅನುದಾನ ಲಭ್ಯವಿದೆ ಎಂದರು.
ಪಿಂಚಣಿ ಯೋಜನೆಯಡಿ 349 ಅಂಗವಿಕಲರು, 238 ವಿಧವಾ ವೇತನ ಹಾಗೂ 580 ಸಂಧ್ಯಾ ಸುರಕ್ಷಾ ವೇತನವನ್ನು ವಿತರಿಸಲಾಗುತ್ತಿದೆ ಎಂದರು.
ಆಲಿಕಲ್ಲು ಮಳೆಯಿಂದಾಗಿ ಜಿಲ್ಲೆಯಲ್ಲಿ 217 ಹೆಕ್ಟರ್ ತೋಟಗಾರಿಕೆ ಬೆಳೆಗಳಾದ ಮಾವು, ಟೋಮೋಟೋ, ಕಲ್ಲಂಗಡಿ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆಯೆಂದು ತೋಟಗಾರಿಕೆ ಉಪನಿರ್ದೇಶಕರು ಸಭೆಗೆ ತಿಳಿಸಿದರು.
ಜನತಾ ದರ್ಶನದಲ್ಲಿ ಎಲ್ಲ ಅರ್ಜಿಗಳು ವಿಲೇವಾರಿಯಾಗಿದ್ದು, ಯಾವುದೇ ಬಾಕಿ ಇಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಐದು ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯಲ್ಲಿ ಒಟ್ಟು 7.81 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇದರಿಂದಾಗಿ ಒಟ್ಟು 2280 ಕೋಟಿ ಆರ್ಥಿಕ ವೆಚ್ಚ ವ್ಯವಹಾರ ಆಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರ ದುಬೆ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಗತಿಗೆ ಈಗಿನಿಂದಲೇ ನೂತನ ಕಾರ್ಯಕ್ರಮಗಳನ್ನು ರೂಪಿಸುವಂತೆ ಉಸ್ತುವಾರಿ ಕಾರ್ಯದರ್ಶಿ ರಂದೀಪ ತಿಳಿಸಿದರು.
ಜಿಲ್ಲೆಯಲ್ಲಿ ಕಂದಾಯ, ಜಿಲ್ಲಾ ಪಂಚಾಯತ, ಸಣ್ಣ ನೀರಾವರಿ ವ್ಯಾಪ್ತಿಯ 344 ಕೆರೆಗಳಿದ್ದು, ಬಹುತೇಕ ಅತಿಕ್ರಮಣ ತೆರವು ಕಾರ್ಯ ಮುಗಿದಿದೆ. ಸಣ್ಣ ನೀರಾವರಿಯ 108 ಕೆರೆಗಳ ಗಡಿ ಗುರುತಿಸಿ ಕ್ರಮ ಕೈಗೊಳ್ಳಲಾಗಿದೆಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿಷಯಗಳನ್ನು ಚರ್ಚಿಸಲಾಯಿತು.
ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3