ಸ್ಯಾಂಡಲವುಡಗೂ ತಲುಪಿದ ಏಕ್ ಲಾಖ್ ಪೇಡ್ ಅಭಿಯಾನ
ಬೀದರ್: ಬೀದರ್‌ನಿಂದ ಆರಂಭವಾದ ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಸ್ಯಾಂಡಲ್‌ವುಡ್‌ಗೂ ತಲುಪಿದೆ.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಅಭಿಯಾನ ನಿಮಿತ್ತ ಬೆಂಗಳೂರಿನಲ್ಲಿ ಖ್ಯಾತ ಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್. ನಾರಾಯಣ್ ಅವರಿಗೆ ಬಿಲ್ವಪತ್ರಿ ಸಸಿ ವಿತರಿಸಿದರು.
ಬಿಲ್ವಪತ್ರಿಗೆ ಆಧ್ಯಾತ್ಮದಲ್ಲಿ ಬಹಳ ಮಹತ್ವ ಇದೆ. ಇದು, ಶಿವನಿಗೆ ಬಹಳ ಪ್ರಿಯವಾದದ್ದು. ಪರಿಸರ ಕಾಳಜಿಯ ಅಭಿಯಾನ ಅಂಗವಾಗಿ ಶಿವಯ್ಯ ಸ್ವಾಮಿ ಅವರು ಬಿಲ್ವಪತ್ರಿ ಸಸಿ ವಿತರಿಸುತ್ತಿರುವುದು ಪ್ರಶಂಸನೀಯ. ಈ ರೀತಿಯ ಅಭಿಯಾನಗಳು ಹೆಚ್ಚೆಚ್ಚು ನಡೆಯಬೇಕು ಎಂದು ಎಸ್. ನಾರಾಯಣ್ ಹೇಳಿದರು.
ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ ಅವರ ಹೆಸರಲ್ಲಿ ಹಮ್ಮಿಕೊಳ್ಳಲಾದ ಅಭಿಯಾನ ಅಂಗವಾಗಿ ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈಗಾಗಲೇ ಬಿಲ್ವಪತ್ರಿ ಸಸಿ ವಿತರಿಸಲಾಗಿದೆ. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ 1,008 ಬಿಲ್ವಪತ್ರಿ ಸಸಿ ಕೊಡಲಾಗಿದೆ ಎಂದು ಅಭಿಯಾನದ ರೂವಾರಿಯೂ ಆದ ಶಿವಯ್ಯ ಸ್ವಾಮಿ ತಿಳಿಸಿದರು.
ಅಭಿಯಾನ ನಿಮಿತ್ತ 93 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಕೆಲವೇ ದಿನಗಳಲ್ಲಿ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಉದಯೋನ್ಮುಖ ನಟ ಶ್ರೀಹರಿ ಪರಾಕ್ರಮ್ ಇದ್ದರು.
