ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಭಾಗವಹಿಸಿ: ಶಾಸಕ ಪ್ರಭು ಚವ್ಹಾಣ*
ಬೀದರ್ : ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ನ್ಯಾಯಮೂರ್ತಿ ಡಾ.ಹೆಚ್.ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಮೇ.5ರಿಂದ 17ರ ವರೆಗೆ ನಡೆಯಲಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ನೈಜ ಮಾಹಿತಿ ಸಂಗ್ರಹಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಗಣತಿದಾರರಿಗೆ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಯಲ್ಲಿ ಲಮಾಣಿ, ಹೊಲೆಯ, ಮಾದಿಗ, ಭೋವಿ, ಕೊರವ, ಕೊರಚ ಸೇರಿದಂತೆ 101 ಉಪ ಜಾತಿಗಳಿವೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿ-ಗತಿಗಳ ವಾಸ್ತವಾಂಶವನ್ನು ತಿಳಿಯಲು ಈ ಸಮೀಕ್ಷೆ ಅತ್ಯಂತ ಮಹತ್ವದ್ದಾಗಿದೆ. ಪರಿಶಿಷ್ಟ ಜಾತಿಯಲ್ಲಿ ಅನಕ್ಷರಸ್ಥರು ಹೆಚ್ಚಿನ ಪ್ರಮಾಣದಲ್ಲಿದ್ದು, ಬಹುತೇಕರಿಗೆ ಸಮೀಕ್ಷೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗೆಯೇ ಸಾಕಷ್ಟು ಹಳ್ಳಿ ಮತ್ತು ತಾಂಡಾಗಳ ಜನತೆ ಬೇರೆ ಪ್ರದೇಶಗಳಿಗೆ ಗುಳೆ ಹೋಗುತ್ತಾರೆ. ಆದ್ದರಿಂದ ಗಣತಿದಾರರು ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸಮೀಕ್ಷೆಯಿಂದ ಯಾರೊಬ್ಬರೂ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಶಿಕ್ಷಕರು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಗ್ರಾಮಸ್ಥರು ಮತ್ತು ತಾಂಡಾ ನಿವಾಸಿಗಳು ಬೇರೆ ಕಡೆ ಗುಳೆ ಹೋಗಿರುವ ಎಲ್ಲರನ್ನು ಮರಳಿ ಕರೆಸಿಕೊಳ್ಳಬೇಕು. ಸಮೀಕ್ಷೆ ಅವಧಿಯಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೇ ತಮ್ಮ ಮೂಲ ಜಾತಿ ಮತ್ತು ಉಪ ಜಾತಿಯನ್ನು ನಮೂದಿಸಬೇಕು. ಗಣತಿದಾರರು ಕೇಳುವ ದಾಖಲಾತಿಗಳನ್ನು ಒದಗಿಸಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು.
ಪರಿಶಿಷ್ಟ ಜಾತಿಗಳ ಉಪ ಜಾತಿಗಳ ಆಧಾರದ ಮೇಲೆ ಮೀಸಲಾತಿ ನಿಗದಿಯಾಗುವುದರಿಂದ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಗೊತ್ತುಪಡಿಸಿದ ಪ್ರಶ್ನಾವಳಿಗಳಿಗೆ ನೈಜ ಉತ್ತರವನ್ನು ನೀಡಬೇಕು. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಉಪ ಜಾತಿಗಳ ಜನತೆಯ ಬಗ್ಗೆ ನಿಖರ ಮಾಹಿತಿ ದಾಖಲಿಸಲು ಸಾಧ್ಯ. ಆದ್ದರಿಂದ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯಗಳ ಜನತೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಶಾಸಕರು ಕೋರಿದ್ದಾರೆ.