ಅಭಿನಂದನಾ ಸಮಾರಂಭದಲ್ಲಿ ಕಾಲೇಜು ಅಧ್ಯಕ್ಷ ಆಸಿಫೊದ್ದೀನ್ ಘೋಷಣೆ
ವಿಸ್ಡಮ್ ಕಾಲೇಜಿನಿಂದ ರೂ. 1 ಕೋಟಿ ವಿದ್ಯಾರ್ಥಿ ವೇತನ
ಬೀದರ್: ವಿಸ್ಡಮ್ ಪದವಿಪೂರ್ವ ವಿಜ್ಞಾನ ಕಾಲೇಜು ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 1 ಕೋಟಿ ವಿದ್ಯಾರ್ಥಿ ವೇತನ
ಕೊಡಲಾಗುವುದು ಎಂದು ಕಾಲೇಜು ಅಧ್ಯಕ್ಷ ಮಹಮ್ಮದ್ ಆಸಿಫೊದ್ದೀನ್ ಪ್ರಕಟಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿಸ್ಡಮ್ ಹಾಗೂ ಇತರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಗರದ ಉರ್ದು ಹಾಲ್‍ನಲ್ಲಿ ಈಚೆಗೆ ಆಯೋಜಿಸಿದ್ದ ಅಭಿನಂದನಾ
ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಪ್ರವೇಶ ಪಡೆಯುವ 400 ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ರೂಪದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು.
ಶೇ 95 ಕ್ಕೂ ಅಧಿಕ ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ 75, ಹಾಸ್ಟೆಲ್ ಶುಲ್ಕದಲ್ಲಿ ಶೇ 50, ಶೇ 85ಕ್ಕೂ ಹೆಚ್ಚು ಅಂಕ ಪಡೆದ 100 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ 35, ಹಾಸ್ಟೆಲ್ ಶುಲ್ಕದಲ್ಲಿ ಶೇ 25
ಹಾಗೂ ಶೇ 75ಕ್ಕೂ ಅಧಿಕ ಅಂಕ ಗಳಿಸಿದ 200 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ 25 ಹಾಗೂ ಹಾಸ್ಟೆಲ್ ಶುಲ್ಕದಲ್ಲಿ ಶೇ 10 ರಷ್ಟು ರಿಯಾಯಿತಿ ಕಲ್ಪಿಸಲಾಗುವುದು
ಎಂದು ಹೇಳಿದರು.
ವಿಸ್ಡಮ್ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತ ಬಂದಿದೆ. ಜಿಲ್ಲೆಯ ಫಲಿತಾಂಶ ಸುಧಾರಣೆಗೂ ಕೊಡುಗೆ ನೀಡುತ್ತಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ 2 ಬರೆಯುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಚಿತ ತರಬೇತಿ ಆರಂಭಿಸಿದ್ದು, ಎಲ್ಲ ಶಾಲೆಗಳ
ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿಸ್ಡಮ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಅಸ್ರಾ ಪ್ರೌಢಶಾಲೆ, ಎಂಬೆಸಿ ಪ್ರೌಢಶಾಲೆ, ರೋಜಾ ಮಿಷನ್ ಪ್ರೌಢಶಾಲೆ,
ಒಯಿಸ್ಟಿರ್ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯೆ ಚೇತನಾ ಮೋಹನ್, ವಿಸ್ಡಮ್ ಕಾಲೇಜು ಕಾರ್ಯದರ್ಶಿ ಮಹಮ್ಮದ್ ಸಲಾವುದ್ದೀನ್, ಪ್ರಾಚಾರ್ಯ ಶೇಕ್ ಮದಾರ್ ಮತ್ತಿತರರು ಇದ್ದರು.