ಪಾಪಿಗಳ ಸರ್ವನಾಶ ಶುರು: ಶಾಸಕ ಶೈಲೇಂದ್ರ ಬೆಲ್ದಾಳೆ
—-
ಬೀದರ್: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್ “ಸಿಂಧೂರ್” ಕಾರ್ಯಾಚರಣೆ ಮುಖಾಂತರ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ 9 ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಿ ಶತ್ರು ರಾಷ್ಟ್ರ ಮಾತ್ರವಲ್ಲ, ಇಡೀ ವಿಶ್ವಕ್ಕೆ ತನ್ನ ಶಕ್ತಿ, ಸಾಹಸ, ಸಾಮರ್ಥ್ಯ ಹಾಗೂ ಪರಾಕ್ರಮ ತೋರಿಸಿಕೊಟ್ಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಏ.22ರಂದು ಪಹಲ್ಗಾಮ್ ದಾಳಿಯಲ್ಲಿ ಅಮಾಯಕ 27 ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆಗೈದ ಭಯೋತ್ಪಾದಕರ ವಿರುದ್ಧ ಕಠೋರ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ನುಡಿದಂತೆ ನಡೆದು ತೋರಿಸಿದ್ದಾರೆ. ಭಾರತದ ಸೇನಾ ವಿಮಾನಗಳು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಬೇಟೆಯಾಡಿದೆ. ಉಗ್ರರನ್ನು ಬೇರು ಸಮೇತ ಕಿತ್ತೊಗೆಯಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಭಯೋತ್ಪಾದಕರ ಕುರಿತು ನಮ್ಮದು ಜಿರೋ ಟಾಲರೆನ್ಸ್ ಇದೆ ಎಂದು ಮೋದಿಜಿ ಸ್ಪಷ್ಟವಾಗಿ ಹೇಳಿದ್ದಾರೆ. ಉಗ್ರರ ದಮನ, ಪಾಪಿಗಳ ಸರ್ವನಾಶ ಈಗ ನಿಶ್ಚಿತವಾಗಿದೆ. ಉಗ್ರರ ರಕ್ಷಕ ಪಾಕಿಸ್ತಾನಕ್ಕೂ ಸಹ ತಕ್ಕ ಪಾಠ ಸಿಗಲಿದೆ. ಕೇಂದ್ರ ಸರ್ಕಾರ, ಭಾರತೀಯ ಸೇನೆಗೆ ಸೆಲ್ಯೂಟ್ ಹೇಳುವೆ. ನಮ್ಮ ಸೇನೆ-ನಮ್ಮ ಹೆಮ್ಮೆ ಎನಿಸಿದೆ ಎಂದು ಬೆಲ್ದಾಳೆ ಪ್ರತಿಕ್ರಿಯಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕರ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯಗಳು ನಡೆಸುತ್ತಿದೆ. ದೇಶದೊಳಗೆ ಅತಿಕ್ರಮ ಪ್ರವೇಶ ಮಾಡುತ್ತಿದೆ. ಈ ಹಿಂದೆ ಭಾರತದೊಂದಿಗೆ ನಾಲ್ಕು ಯುದ್ಧ ಮಾಡಿದೆ. ಈ ನಾಲ್ಕೂ ಯುದ್ಧದಲ್ಲಿ ಹೀನಾಯ ಸೋಲು ಕಂಡಿದೆ. ಆದರೂ ಪಾಠ ಕಲಿಯದೆ ಭಂಡತನ ಪ್ರದರ್ಶಿಸುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿ ಕಂಗಾಲಾದ ಪಾಪಿ ಪಾಕಿಸ್ತಾನಕ್ಕೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಭಾರತ ಈ ಬಾರಿ ಮಣ್ಣು ಮುಕ್ಕಿಸಲಿದೆ. ಪಾಕ್ ಆಕ್ರಮಿತ ಕಾಶ್ಮೀರ ಸಹ ಭಾರತದ ಸುಪರ್ದಿಗೆ ಬರುವ ದಿನಗಳು ಈಗ ಸನ್ನಿಹಿತವಾಗಿವೆ. ಮೋದಿ ಹೈ ತೊ ಸಬ್ ಮುಮಕಿನ್ ಹೈ ಎಂಬುದು ಮತ್ತೆ ಸಾಬೀತಾಗಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
—-