ಅವಧಿ ಪೂರ್ಣಗೊಳಿಸಿದ ಅಧಿಕಾರಿಗಳ ವರ್ಗಾಯಿಸಿ
ಬೀದರ್: ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಅವಧಿ ಪೂರೈಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ದಲಿತ ಸೇನೆ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸೇನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮಾರು ವರ್ಷಗಳಿಂದ ಬಿಡಾರ ಹೂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಸರ್ಕಾರದ ನಿಯಮಾನುಸಾರ ಅವಧಿ ಪೂರ್ಣಗೊಳ್ಳುವ ಹಂತದಲ್ಲಿ ಇತರ ಇಲಾಖೆಗೆ ನಿಯೋಜನೆ ಪಡೆದು, ನಂತರ ಮತ್ತೆ ಮಾತೃ ಇಲಾಖೆಗೆ ಮರು ನಿಯೋಜನೆ ಪಡೆಯುತ್ತಿದ್ದಾರೆ ಎಂದು ಗಮನ ಸೆಳೆದರು.
ಸರ್ಕಾರದ ಮಾರ್ಗಸೂಚಿಯಲ್ಲಿನ ಕೆಲ ನ್ಯೂನ್ಯತೆಗಳ ಲಾಭ ಪಡೆದು, ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಾನಸನ್ ಘೋಡೆ, ಅಧ್ಯಕ್ಷ ಧನರಾಜ ಕೊಳಾರ, ಉಪಾಧ್ಯಕ್ಷ ಸಂಜು ಲಕ್ಷ್ಮಿದೊಡ್ಡಿ, ಕಾರ್ಯದರ್ಶಿ ಗುರುದಾಸ ಅಮದಲಪಡ, ಜಂಟಿ ಕಾರ್ಯದರ್ಶಿ ಗಜಾ ಸೂರ್ಯ, ವಿಲ್ಸನ್ ದೊಡ್ಡಮನಿ ಇದ್ದರು.
—————
—————