ಬೀದರ್ : ಮಹಾಪುರುಷರ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳನ್ನು ಆಗಾಗ್ಗೆ ಮಾಡುತ್ತಾ ಇರಬೇಕು. ಆಗ ಮಾತ್ರ ಸಮಾಜ ಜಾಗೃತವಾಗಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ, ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ವೀರ ಮಹಾತ್ಮ ಶ್ರೀ ಬೊಮ್ಮಗೊಂಡೇಶ್ವರರ ಉತ್ಸವದ ವೇದಿಕೆ ಕಾರ್ಯಕ್ರಮ’ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮರ ಇತಿಹಾಸ ಸಾರುವ ಹಾಗೂ ಮಹಾತ್ಮರ ಜೀವನ ಚರಿತ್ರೆ ಮತ್ತು ಸಾಧನೆಗಳ ಬಗ್ಗೆ ತಿಳಿಸುವ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದರು.

ಎಲ್ಲಾ ಮಹಾಪುರುಷರು ಅವರ ವೈಯಕ್ತಿಕ ಜೀವನಕ್ಕಾಗಿಯೋ, ಕುಟುಂಬ, ಮಕ್ಕಳಿಗಾಗಿಯೋ ಏನನ್ನು ಮಾಡಲಿಲ್ಲ. ಮಾನವ ಕುಲದ ಒಳಿತಿಗಾಗಿ ಅವರು ಶ್ರಮಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ರವರು ಸೇರಿದಂತೆ ಅನೇಕ ಜನ ಮಹಾಪುರುಷರು ತಮ್ಮ ತಮ್ಮ ಕಾಲಘಟ್ಟದಲ್ಲಿ ಸಮಾಜದ ಒಳಿತಿಗಾಗಿ ದುಡಿದಿದ್ದಾರೆ.
ಅಂತಹ ಮಹಾತ್ಮರಲ್ಲಿ ಸಾಂಸ್ಕೃತಿಕ ವೀರ ಮಹಾತ್ಮ ಬೊಮ್ಮಗೊಂಡೇಶ್ವರರು ಒಬ್ಬರಾಗಿದ್ದಾರೆ. ಅವರ ಐತಿಹಾಸಿಕ ಚರಿತ್ರೆಯನ್ನು ಇಟ್ಟುಕೊಂಡು ದೊಡ್ಡ ಪುಸ್ತಕ ಬಿಡುಗಡೆ ಮಾಡಿರುವುದು ಖುಷಿಯ ವಿಷಯವಾಗಿದೆ. ಇದರ ಲೇಖಕರಾಗಿರುವ ಡಾ. ಸುನೀತಾ ಕೂಡ್ಲಿಕರರವರಿಗೆ ನಾನು ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸ್ವಾಮೀಜಿಗಳು, ಗೊಂಡ ಸಮಾಜದ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅನೇಕರಿದ್ದರು.
—————-