Saturday, May 24, 2025
Homeಜಿಲ್ಲೆಸಂವಿಧಾನದ ಮೇಲೆ ಬೆಳಕು ಚೆಲ್ಲಿದ ಪ್ರಥಮ ಕವನ ಸಂಕಲನ ಭಾಗ್ಯವಿಧಾತ – ಕಾವ್ಯಶ್ರೀ

ಸಂವಿಧಾನದ ಮೇಲೆ ಬೆಳಕು ಚೆಲ್ಲಿದ ಪ್ರಥಮ ಕವನ ಸಂಕಲನ ಭಾಗ್ಯವಿಧಾತ – ಕಾವ್ಯಶ್ರೀ

ಬೀದರ್: ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರು ಪರಕಾಯ ಪ್ರವೇಶ ಮಾಡಿ ಭಾರತದ ಕೋಟಿ ಕೋಟಿ ಜನರ ಮನಸ್ಸು ಅರ್ಥಮಾಡಿಕೊಂಡು ರಚಿಸಿದ ಸಂವಿಧಾನ ಕುರಿತು ರಚನೆಯಾದ ಕವನ ಸಂಕಲನವೇ ಭಾಗ್ಯವಿಧಾತ. ಇದನ್ನು ಪ್ರ ಪ್ರಥಮ ಬಾರಿಗೆ ಅರ್ಥಪೂರ್ಣವಾಗಿ ಎಂ.ಎಸ್.ಮನೋಹರ ಅವರು ರಚಿಸಿದ್ದಾರೆ ಎಂದು ಮಹಿಳಾ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ ತಿಳಿಸಿದರು.

ನಗರದ ಮಹಾಲಕ್ಷ್ಮಿ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ವತಿಯಿಂದ ಭಾರತದ ಸಂವಿಧಾನದ ಮಹತ್ವ ಸಾರುವ ಭಾಗ್ಯವಿಧಾತ ಕವನ ಸಂಕಲನ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಕವನ ಸಂಕಲನದಲ್ಲಿ 48 ಸಾಹಿತಿಗಳು ಸಂವಿಧಾನವನ್ನು ಅಧ್ಯಯನ ಮಾಡಿ ಕವನ ರಚನೆ ಮಾಡಿದ್ದಾರೆ. 20 ಜನ ಮಹಿಳಾ ಸಾಹಿತಿಗಳು, ಯುವ ಕವಿಗಳಿಗೆ ಸಂವಿಧಾನ ಓದುವಂತೆ ಪ್ರೇರೇಪಿಸಲಾಗಿದೆ. ಸಂವಿಧಾನ ಕುರಿತು ಬಹುಶಃ ಇದು ಮೊದಲನೇ ಕವನ ಸಂಕಲನವಾಗಿದೆ ಎಂದರಲ್ಲದೆ ಅಂಬೇಡ್ಕರರು ಪರಕಾಯ ಪ್ರವೇಶ ಮಾಡಿ ಜನರ ನೋವು, ಮನಸ್ಸು ಅರ್ಥಮಾಡಿಕೊಂಡ ಕಾರಣವೇ ಒಂದು ಅರ್ಥಪೂರ್ಣ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು. ಮಹಿಳೆಗೆ ಸಮಾನತೆ ಸಿಗಲು ಸಾಕಷ್ಟು ಪ್ರಯತ್ನ ಮಾಡಿದ್ದ ಅಂಬೇಡ್ಕರರು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಿ ಹೋಗಿದ್ದಾರೆ. ಹೆಣ್ಣು ಪ್ರೀತಿ ಇದ್ದಲ್ಲಿ ಮಾತ್ರ ಸಹನಶೀಲಳಾಗಬೇಕು. ಇಲ್ಲದಿದ್ದಲ್ಲಿ ಸಿಡಿದೇಳಬೇಕೆಂದು ತಿಳಿಸಿದರು. ಉತ್ತಮ ಕಾರ್ಯ ಇದ್ದಾಗ ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಒತ್ತಾಯದ ಚರ್ಚೆಗಳಾಗಬಾರದು. ಅವು ತತಕ್ಷಣವೇ ಕಾನೂನು ಜಾರಿಗೆ ತರಬೇಕೆಂಬುದು ಅಂಬೇಡ್ಕರರ ಸದಾಶಯವಾಗಿತ್ತು ಎಂದು ಮಾರ್ಮಿಕವಾಗಿ ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಸಂವಿಧಾನ ಅರಿತರೆ ನಾವು ಯಾರಿಗೂ ಏಕವಚನದಲ್ಲಿ ಮಾತನಾಡುವುದಿಲ್ಲ. ಅಂತಹ ಅದ್ಭುತ ಕಾನೂನು ಈ ನೆಲಕ್ಕೆ ಅಂಬೇಡ್ಕರರು ನೀಡಿದ್ದಾರೆ. ಮಹಿಳೆ, ಮಕ್ಕಳು, ಹಿರಿಯರು, ಯುವಕರು, ತುಳಿತಕ್ಕೊಳಗಾದವರು, ಶೋಷಿತರು, ದಮನಿತರು ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯ ಬಾಬಾ ಸಾಹೇಬರು ಮಾಡಿಹೋಗಿದ್ದಾರೆ. ಅವರ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರಲ್ಲದೆ ಸಮಾಜದಲ್ಲಿ ಹಲವರು ಹಲವು ರೀತಿಯ ಕ್ರಾಂತಿ ಮಾಡುತ್ತಾರೆ. ಆದರೆ ಎಂ.ಎಸ್.ಮನೋಹರ ಅವರು ಪುಸ್ತಕದ ಮೂಲಕ ಸಂವಿಧಾನ ಜಾಗೃತಿ ಮಾಡುತ್ತಿದ್ದಾರೆ. ಸಂವಿಧಾನ ಕುರಿತ ಭಾಗ್ಯವಿಧಾತ ಪ್ರಥಮ ಕವನ ಸಂಕಲನ ಎಂದರೂ ಅತಿಶಯೋಕ್ತಿಯೇನಲ್ಲ ಎಂದು ಶ್ಲಾಘಿಸಿದರು.

ಪುಸ್ತಕದ ಕುರಿತು ಪರಿಚಯ ಮಾಡಿಕೊಟ್ಟ ಸಾಹಿತಿ ಧನರಾಜ ತುಡಮೆ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರು ವಿಶ್ವದ ಜನರ ಹೃದಯದಲ್ಲಿ ಅಚ್ಚೊತ್ತಿದಂತಿದ್ದಾರೆ. ದೇಶಕ್ಕೆ ರಾಜಪ್ರಭುತ್ವಕ್ಕಿಂತ ಪ್ರಜಾಪ್ರಭುತ್ವದ ಅವಶ್ಯಕತೆಯಿದೆ ಎಂದು ಮನಗಾಣಿದವರು ಅಂಬೇಡ್ಕರರು. ಬಹುತ್ವ ಭಾರತಕ್ಕೆ ಸಂವಿಧಾನ ಕೊಡುವುದು ಎಂದರೆ ಅದೇನು ಸುಲಭದ ಮಾತಲ್ಲ. ಮುಳ್ಳಿನ ಮೊನೆಯಷ್ಟೂ ಲೋಪವಿಲ್ಲದ ಸಂವಿಧಾನ ಭೀಮತಂದೆ ದೇಶಕ್ಕೆ ನೀಡಿದ್ದಾರೆ. ಎಲ್ಲರ ಅಭ್ಯುದಯಕ್ಕಾಗಿ ರಚಿಸಿದ ಸಂವಿಧಾನವು ಎಲ್ಲರನ್ನೂ ಹಿಡಿದಿಡುವ ಪ್ರಯತ್ನ ಮಾಡಿದೆ. ಈ ಕೃತಿಯಲ್ಲಿರುವ ಕವನಗಳು ಓದುಗರನ್ನು ಓದಿಸಿಕೊಂಡು ಹೋಗುವಂತಿವೆ. ಒಂದೊಂದು ಕವಿತೆಗಳು ಸಂವಿಧಾನದ ಮೇಲೆ ಬೆಳಕು ಚೆಲ್ಲುತ್ತ ಅರ್ಥಪೂರ್ಣವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎ.ಎಸ್.ಮನೋಹರ ಮಾತನಾಡಿ ವ್ಯಕ್ತಿಯ ಬದುಕಿನ ತುಡಿತ, ಭಾವನೆಗಳ ಹೊಯ್ದಾಟ, ವಾದ ವಿವಾದಗಳ ಬಗೆಹರಿಯುವಿಕೆಗೆ ಸಂವಿಧಾನದ ಕಾನೂನು ಬೇಕೇ ಬೇಕು. ವ್ಯಕ್ತಿ ಸಮಸ್ಯೆಗಳನ್ನು ಹೊತ್ತುಕೊಂಡು ಗುಡಿ ಗುಂಡಾರಗಳಿಗೆ ಹೋದರೂ, ಸಂಬಂಧಿಕರ ಹತ್ತಿರ ಹೋದರೂ ಒಂದು ದಿನ ಎಲ್ಲರೂ ದೂರ ಸರಿಯುತ್ತಾರೆ. ಆದರೆ ಕಾನೂನು ಮಾತ್ರ ಕೊನೆಗೆ ನಮ್ಮ ಕೈ ಹಿಡಿಯುತ್ತದೆ. ಅಂತಹ ಪರಿಪಕ್ವ ಕಾನೂನು ಅಂಬೇಡ್ಕರರು ಸಂವಿಧಾನದ ಮೂಲಕ ನಮಗೆ ನೀಡಿ ಹೋಗಿದ್ದಾರೆ. ಅದರಿಂದಲೇ ನಮ್ಮ ಉಳಿವು ಸಾಧ್ಯ. ಸಮಸ್ಯೆಗಳನ್ನು ವಕೀಲರ ಮತ್ತು ಪೊಲೀಸರ ಹತ್ತಿರ ತೆಗೆದುಕೊಂಡು ಹೋಗುವುದಕ್ಕಿಂತ ಸಂವಿಧಾನವನ್ನು ನಾವೇ ಅರಿಯಬೇಕೆಂದು ಸಲಹೆ ನೀಡಿದರು.

ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಯಿತು. ವೇದಿಕೆ ಮೇಲೆ ನಿವೃತ್ತ ಪ್ರಾಚಾರ್ಯ ಡಾ. ದೇವಿದಾಸ ತುಮಕುಂಟೆ ಇದ್ದರು. ಶಂಭುಲಿಂಗ ವಾಲದೊಡ್ಡಿ ಪ್ರಾರ್ಥಿಸಿದರು. ಟ್ರಸ್ಟ್ ಖಜಾಂಚಿ ಸುಭಾಷ ರತ್ನ ಸ್ವಾಗತಿಸಿದರು. ಟ್ರಸ್ಟ್ ಉಪಾಧ್ಯಕ್ಷ ಸುಮಂತ ಕಟ್ಟಿಮನಿ ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣಚಂದ್ರ ಎಂ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ರಜಿಯಾ ಬಳಬಟ್ಟಿ, ಮಾರುತಿ ಬೌದ್ಧೆ, ನಾಗಶೆಟ್ಟಿ ಪಾಟೀಲ ಗಾದಗಿ, ಸುಜಾತಾ ಹೊಸಮನಿ, ದಿಲೀಪ ಆರ್., ಎಸ್.ಬಿ.ಕುಚಬಾಳ, ಅಶ್ವಜಿತ ದಂಡಿನ್, ಡಾ. ಶ್ರೇಯಾ ಯಶಪಾಲ, ರಮೇಶ ಬಿರಾದಾರ, ಮಾಣಿಕ ನೇಳಗಿ, ಮಹೇಶ ಗೋರನಾಳಕರ್, ರೂಪಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಲವು ಕವಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3