ಮಂಗಳೂರಿನ ಮದ್ವ ಗ್ರಾಮಕ್ಕೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ
ಸುಹಾಸ್ ಶೆಟ್ಟಿ ಕುಟುಂಬಕ್ಕೆ ವೀರಶೇಟ್ಟಿ ಖ್ಯಾಮಾ 1 ಲಕ್ಷ ರೂ. ನೆರವು
ಬೀದರ್: ಮಂಗಳೂರಿನಲ್ಲಿ ಇತ್ತೀಚೆಗೆ ಭೀಕರವಾಗಿ ಹತ್ಯೆಗೀಡಾದ ಹಿಂದು ಯುವ ಕಾರ್ಯಕರ್ತ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಇಲ್ಲಿಯ ಹಿಂದುಪರ ಸಂಘಟನೆ ಮುಖಂಡ ವೀರಶೆಟ್ಟಿ ಖ್ಯಾಮಾ ಅವರು ಸಾಂತ್ವನ ಹೇಳಿ, 1 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ್ದಾರೆ.
ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮದ್ವ ಗ್ರಾಮದಲ್ಲಿರುವ ಸುಹಾಸ್ ಶೆಟ್ಟಿ ಮನೆಗೆ ಗುರುವಾರ ಭೇಟಿ ನೀಡಿದ ವೀರಶೆಟ್ಟಿ ಖ್ಯಾಮಾ ಅವರು, ತಂದೆ ಮೋಹನ್ ಶೆಟ್ಟಿ, ತಾಯಿ ಸುಲೋಚನಾ ಶೆಟ್ಟಿ ಹಾಗೂ ಸಹೋದರ ಸೋಹನ್ ಶೆಟ್ಟಿ ಅವರಿಗೆ ಸಾಂತ್ವನ ಹೇಳಿದರು. ಇಡೀ ಹಿಂದು ಸಮಾಜ ನಿಮ್ಮ ಪರಿವಾರದ ಜೊತೆಗಿದೆ. ಯಾವುದಕ್ಕೂ ಎದೆಗುಂದಬಾರದು ಎಂದು ಧೈರ್ಯ ತುಂಬಿದರು.
ಸುಹಾಸ್ ಶೆಟ್ಟಿ ತೀರ ಬಡ ಕುಟುಂಬದಿಂದ ಬಂದವರು. ಆದರೆ ಸಂಘದ ನೆಲೆಗಟ್ಟಿನಲ್ಲಿ ಬೆಳೆದು ಹಿಂದುತ್ವ ಹಾಗೂ ರಾಷ್ಟ್ರಪರ ಕೆಲಸ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಕೆಲವು ಮತಾಂಧ ಶಕ್ತಿಗಳು ಇವರ ಪ್ರಖರ ಹಿಂದುತ್ವವಾದ ಸಹಿಸದೇ ಹತ್ಯೆ ಮಾಡಿರುವುದು ಖಂಡನೀಯ. ಕರಾವಳಿ ಭಾಗದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಂತಹ ಮಾರಕ ಬೆಳವಣಿಗೆ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಈ ವಿಷಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಸಮುದಾಯದ ಮತಾಂಧರನ್ನು, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.
ಹಿಂದು ಸಮಾಜ ಅತ್ಯಂತ ಸಹಿಷ್ಣುತೆ ಹೊಂದಿರುವ ಸಮಾಜ. ಆದರೆ ಈ ಸಮಾಜದ ಮೇಲೆ ನಿರಂತರ ಅನ್ಯಾಯ, ದಬ್ಬಾಳಿಕೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ. ಇನ್ನಾದರೂ ಸಮಾಜ ಸಂಘಟಿತರಾಗುವ ಅಗತ್ಯವಿದೆ. ಸುಹಾಸ್ ಶೆಟ್ಟಿ ಪರಿವಾರಕ್ಕೆ ಹಿಂದು ಸಮಾಜ ಇದುವರೆಗೆ ಸುಮಾರು 72 ಲಕ್ಷಕ್ಕೂ ಹೆಚ್ಚು ಧನಸಹಾಯ ಮಾಡಿ ನೆರವಿಗೆ ಬಂದಿದೆ. ಸಮಾಜದ ದಾನಿಗಳು ಈ ಕುಟುಂಬಕ್ಕೆ ಇನ್ನಷ್ಟು ನೆರವು ನೀಡಿ ಆರ್ಥಿಕ ಶಕ್ತಿ ತುಂಬಬೇಕು. ಭಯದಲ್ಲಿ ಕಾಲ ಕಳೆಯುತ್ತಿರುವ ಈ ಪರಿವಾರಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಖ್ಯಾಮಾ ಒತ್ತಾಯಿಸಿದ್ದಾರೆ.
====