ಬೀದರ್: ನಗರದ ಅಕ್ಕ ಮಹಾದೇವಿ ಪದವಿ ಕಾಲೇಜಿನಲ್ಲಿ ಬುಧವಾರ ಸಂಭ್ರಮದಿಂದ ವಾರ್ಷಿಕೋತ್ಸವ ನಡೆಯಿತು.
ವಾರ್ಷಿಕೋತ್ಸವವು ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿತು. ವಿದ್ಯಾರ್ಥಿನಿಯರ ನೃತ್ಯ, ಗಾಯನ, ಹಾಸ್ಯ, ನಾಟಕ ಪ್ರದರ್ಶನ ಮೊದಲಾದವು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಗುರುವಿನ ಮೇಲೆ ಶ್ರದ್ಧೆ ಇರಲಿ:
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜು ಪ್ರಾಚಾರ್ಯೆ ಡಾ. ರಂಜನಾ ಪಾಟೀಲ ಅವರು, ವಿದ್ಯಾರ್ಥಿಗಳು ಗುರುವಿನ ಮೇಲೆ ಶ್ರದ್ಧೆ ಇಡಬೇಕು ಎಂದು ಹೇಳಿದರು.
ಗುರುವಿನ ಮಾರ್ಗದರ್ಶನದಿಂದ ಭವಿಷ್ಯ ಉಜ್ವಲಗೊಳ್ಳುತ್ತದೆ. ಆದರ್ಶ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ. ಮನೋಜಕುಮಾರ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಗಂಗಾಂಬಿಕೆ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಕ ಮಹಾದೇವಿ ಕಾಲೇಜು ಜಿಲ್ಲೆಯಲ್ಲಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.
ಶಾಂತಿವರ್ಧಕ ಬಿ.ಎಡ್. ಕಾಲೇಜು ಪ್ರಾಚಾರ್ಯ ಸಂತೋಷಕುಮಾರ, ಅಕ್ಕ ಮಹಾದೇವಿ ಕನ್ಯಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸತೀಶಕುಮಾರ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಜ್ಯೋತಿ ಜೀರ್ಗೆ ವಾರ್ಷಿಕ ವರದಿ ವಾಚಿಸಿದರು. ರಾಜೇಶ್ವರಿ ಸ್ವಾಗತಿಸಿದರು. ಶ್ರೇಯಾ, ಶಿವಾನಿ ನಿರೂಪಿಸಿದರು. ಉಜ್ಮಾ ವಂದಿಸಿದರು.