ಬೀದರ್: ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಕ್ರೈಸ್ತ ಸಮುದಾಯ ಭವನ, ಸಮಾಧಿ ಸುತ್ತುಗೋಡೆ ನಿರ್ಮಾಣ ಹಾಗೂ ಚರ್ಚ್‍ಗಳ ದುರಸ್ತಿಗೆ ಅನುದಾನ ಕಲ್ಪಿಸಲಾಗುವುದು ಎಂದು ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಭರವಸೆ ನೀಡಿದರು.
ಬೀದರ್ ತಾಲ್ಲೂಕಿನ ಮೊಗದಾಳ ಸಮೀಪದ ನ್ಯೂ ಬೆಥೆಲ್ ಚರ್ಚ್‍ನಲ್ಲಿ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಪಾಸ್ಟರ್‍ಗಳ ವತಿಯಿಂದ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮುದಾಯದವರು ಅವಶ್ಯಕ ಕಾಮಗಾರಿ ಸಂಬಂಧ ಮನವಿ ಸಲ್ಲಿಸಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೇವಸ್ಥಾನಗಳ ಅರ್ಚಕರು, ಮಸೀದಿಗಳ ಇಮಾಮ್ ಹಾಗೂ ಮೌಜನ್‍ಗಳ ಮಾದರಿಯಲ್ಲಿ ಪಾಸ್ಟರ್‍ಗಳಿಗೂ ಸರ್ಕಾರದಿಂದ ಗೌರವ ಧನ ಕೊಡಿಸಲು ಯತ್ನಿಸಲಾಗುವುದು. ಶೀಘ್ರದಲ್ಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಪಾಸ್ಟರ್‍ಗಳ ಬೇಡಿಕೆ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಕ್ರೈಸ್ತರು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಬೇಕು. ಸರ್ಕಾರದ ಶೈಕ್ಷಣಿಕ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್‍ನಂಥ ಉನ್ನತ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಚರ್ಚ್ ಪಾಸ್ಟರ್ ಮಾರ್ಕ್ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಶಿರೋಮಣಿ ಮನ್ನಾಎಖ್ಖೆಳ್ಳಿ, ಮೋಜಸ್ ಮನ್ನಾಎಖ್ಖೆಳ್ಳಿ, ವಿಜಯಕುಮಾರ ಚಾಂಗಲೇರಾ, ಗಣಪತರಾವ್ ಆಸ್ಕರ್, ಜೀವನ ಚಿದ್ರಿ, ಜಾಕೋಬ್ ಮುಸ್ತಾಪುರಕರ್, ಘಾಳೆಪ್ಪ, ಮೌಂಟಿ ಗುತ್ತೆದಾರ್, ಪ್ರಕಾಶ್ ಬಂಬಳಗಿ, ಧನರಾಜ, ಜೈರಾಜ್, ವಿವಿಧ ಚರ್ಚ್‍ಗಳ ಪಾಸ್ಟರ್‍ಗಳು ಇದ್ದರು.