ಬೀದರ್: ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ನಿವೇಶನ ಒದಗಿಸಬೇಕು ಎಂದು ದಿ ಬುದ್ಧ ಯುತ್ ಕ್ಲಬ್ ಅಧ್ಯಕ್ಷ ಮಹೇಶ ರಾಂಪುರೆ ಒತ್ತಾಯಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಮುದಾಯಗಳ ಭವನ ನಿರ್ಮಾಣ ಮಾಡಲಾಗಿದೆ. ಆದರೆ, ಪರಿಶಿಷ್ಟ ಜಾತಿಯವರಿಗೆ ಭವನ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಸಮುದಾಯ ಭವನ ಇಲ್ಲದ ಕಾರಣ ಪರಿಶಿಷ್ಟ ಜಾತಿಯವರಿಗೆ ಮದುವೆ, ಸಭೆ, ಸಮಾರಂಭ, ಸಣ್ಣ ಪುಟ್ಟ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಭವನಕ್ಕೆ ನಿವೇಶನ ಹಾಗೂ ಅನುದಾನ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಭವನಕ್ಕೆ ಅನುದಾನ ಒದಗಿಸಲು ನಿವೇಶನ ಲಭ್ಯತೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ಇಲಾಖೆಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಆದರೆ, ಎರಡು ವರ್ಷ ಕಳೆದರೂ ಪ್ರಸ್ತಾವ ಸಲ್ಲಿಸಿಲ್ಲ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಜಿಲ್ಲಾ ಆಡಳಿತ ಕೂಡಲೇ ಡಾ. ಅಂಬೇಡ್ಕರ್ ಭವನಕ್ಕೆ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
—————-