ಬೀದರ್: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿರುವುದು ಚಾರಿತ್ರಿಕವಾಗಿದೆ. ಸಂವಿಧಾನದ ಕಲಂ ೩೭೦ ರದ್ಧತಿ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-೨೦೨೪ ಜಾರಿ ಮೂಲಕ
ಭಾರತದ ಏಕತೆ, ಅಖಂಡತೆ, ಧಾರ್ಮಿಕ ಸಮನ್ವಯತೆ ಮತ್ತು ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಾಂತಿಕಾರಕ ಕ್ರಮ ಎನಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಈಗಾಗಲೇ ಚಾಲ್ತಿಯಲ್ಲಿದ್ದ ವಕ್ಫ್ ಕಾಯ್ದೆ ಸಾಕಷ್ಟು ಲೋಪದೋಷಗಳಿಂದ ಕೂಡಿತ್ತು. ಇದು ಅಮಾಯಕರ ಜಾಗ ಕಬಳಿಕೆಯ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿತ್ತು. ಇದರ ಕರಾಳತೆಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಜಾತಿ, ವರ್ಗಗಳ ಅಸಂಖ್ಯಾತ ಜನರು ದಶಕಗಳಿಂದ ನಾನಾ ಸಂಕಷ್ಟ ಎದುರಿಸುತ್ತಿದ್ದಾರೆ. ಜೀವನಾಧಾರದ ಜಮೀನನ್ನು ಕಳೆದುಕೊಂಡು ಅದೆಷ್ಟೋ ಬಡ, ರೈತ ಕುಟುಂಬ ಬೀದಿಗೆ ಬಂದಿವೆ. ಇದೀಗ ಈ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲರಿಗೂ ನ್ಯಾಯ ಒದಗಿಸುವ ಮಹತ್ವದ ಕೆಲಸ ಸರ್ಕಾರ ಮಾಡಿದೆ. ಇದು ಸಂವಿಧಾನದ ಜಾತ್ಯತೀತ ತತ್ವದ ಮೌಲ್ಯಗಳನ್ನು ಸಹ ಎತ್ತಿ ಹಿಡಿದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ಹಿತ ಹಾಗೂ ಸಮಾಜದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಎಲ್ಲವೂ ಪರಾಮರ್ಶಿಸಿಯೇ ವಕ್ಫ್ ತಿದ್ದುಪಡಿ ಮಸೂದೆ ಸಿದ್ಧಪಡಿಸಿದೆ. ಈ ಸಂಬAಧ ಜಂಟಿ ಸಂಸದೀಯ (ಜೆಪಿಸಿ) ರಚಿಸಿ ಸಾರ್ವಜನಿಕರಿಂದ ಅಭಿಪ್ರಾಯ ಸಹ ಸಂಗ್ರಹಿಸಿದೆ. ಯಾರಿಗೂ ಸಮಸ್ಯೆಯಾಗದ ರೀತಿಯಲ್ಲಿ ಹಾಗೂ ಸಂವಿಧಾನದ ಚೌಕಟ್ಟಿನಲ್ಲಿಯೇ ಎಲ್ಲವೂ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಇದಕ್ಕೆ ತಿದ್ದುಪಡಿ ತರಲಾಗಿದೆ. ಇದು ಮುಸ್ಲಿಂ ವಿರೋಧಿ ತಿದ್ದುಪಡಿ ಎಂಬ ವಿಪಕ್ಷಗಳ ಆರೋಪಗಳು ತಲೆಬುಡವಿಲ್ಲದ್ದಾಗಿವೆ. ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಹಾಗೂ ತುಷ್ಠೀಕರಣ ರಾಜಕೀಯಕ್ಕಾಗಿ ಇದಕ್ಕೆ ವಿರೋಧ ಮಾಡಿ ವಿನಾಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಡಾ.ಬೆಲ್ದಾಳೆ ಹೇಳಿದ್ದಾರೆ.
ವಕ್ಫ್ ಕಿತಾಪತಿಗೆ ಅನೇಕರು ಬೆಚ್ಚಿಬಿದ್ದಿದ್ದಾರೆ. ನನ್ನ ಕ್ಷೇತ್ರದ ಧರ್ಮಾಪುರ ಇಡೀ ಗ್ರಾಮವೆಲ್ಲ ವಕ್ಫ್ ಎಂದು ಪಹಣಿಯಲ್ಲಿ ಬಂದಿದೆ. ಚಟನಳ್ಳಿ ಗ್ರಾಮವೊಂದರಲ್ಲೇ ಸುಮಾರು ೯೦೦ ಎಕರೆಯಷ್ಟು ಜಮೀನಿನ ಪಹಣಿಯಲ್ಲಿ ರಾತೋರಾತ್ರಿ ವಕ್ಫ್ ಹೆಸರು ನಮೂದಾಗಿದೆ. ನಾಲ್ಕೈದು ತಲೆಮಾರುಗಳಿಂದ ಉಳುಮೆ ಮಾಡುತ್ತಿದ್ದ ಜಮೀನು ಅದ್ಹೇಗೆ ದಿಢೀರ್ ವಕ್ಫ್ ಹೆಸರಿಗೆ ಬಂತು ಎಂಬುದೇ ಇಂದಿಗೂ ನಿಗೂಢವಿದೆ. ಕಳೆದ ಒಂದೂವರೆ ದಶಕದಿಂದ ರೈತರು ನ್ಯಾಯಕ್ಕಾಗಿ ಪರದಾಡುತ್ತಿದ್ದಾರೆ. ಬೀದರ್ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಇಂತಹ ಕಿತಾಪತಿ ಪ್ರಕರಣ ಬೆಳಕಿಗೆ ಬಂದಿವೆ. ಈ ತಿದ್ದುಪಡಿ ಕಾಯ್ದೆ ಮುಖಾಂತರ ಶೋಷಣೆಗೊಳಗಾದ, ನೊಂದ ಜನರಿಗೆ ನ್ಯಾಯ ಸಿಕ್ಕಿತೆಂಬ ಆಶಾಭಾವ ಮೂಡಿದೆ. ಇಂತಹ ಮಹತ್ವದ ಜನಪರ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರದ ಕ್ರಮ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ ಎಂದು ಬಣ್ಣಿಸಿದ್ದಾರೆ.
ಕೋಟ್
—
ಸರಣಿ ಬೆಲೆಯೇರಿಕೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ ಹೆಚ್ಚಿಸಿದ ಬೆನ್ನಲ್ಲೇ ಪ್ರತಿ ಲೀಟರ್ ಡೀಸೆಲ್ ಬೆಲೆ ೨ ರೂ. ಏರಿಸಿ ಬರೆ ಎಳೆದಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರ್ಕಾರ ಜನರ ಮೇಲೆ ಸತತ ಹೊರೆ ಹಾಕುತ್ತಿದೆ. ಬೆಲೆಗಳ ಏರಿಕೆ ಬಡ, ಮಧ್ಯಮ ಜನರ ಜೀವನ ದುಸ್ತರಗೊಳಿಸಿದೆ. ಈ ಸರ್ಕಾರಕ್ಕೆ ಬಡವರ ಶಾಪ ತಟ್ಟಲಿದೆ.
– ಡಾ.ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ಶಾಸಕರು ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ
———————–