ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ತಾಲ್ಲೂಕಿನ ಅಲಿಯಂಬರ್ ಗ್ರಾಮದ ಗಂಗಾಧರ ಮಠದ ನೂತನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವನಾಥ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವದಲ್ಲಿ ಮಠದ ಪೀಠಾಧಿಪತಿ ಡಾ. ನಾಗಭೂಷಣ ಶಿವಾಚಾರ್ಯರು ನೂತನ ಉತ್ತರಾಧಿಕಾರಿ ಹೆಸರು ಪ್ರಕಟಿಸಿದರು.
ಗಂಗಾಧರ ಮಠ ಹಳೆಯ ಮಠಗಳಲ್ಲಿ ಒಂದಾಗಿದೆ. ಗವೇಶ್ವರ ಶಿವಾಚಾರ್ಯರು ಸ್ಥಾಪಿಸಿದ ಈ ಮಠಕ್ಕೆ ಈವರೆಗೆ 12 ಪೀಠಾಧಿಪತಿಗಳು ಆಗಿ ಹೋಗಿದ್ದಾರೆ.
ಈಗಿನ ಪೀಠಾಧಿಪತಿ ಡಾ. ನಾಗಭೂಷಣ ಶಿವಾಚಾರ್ಯರು 13ನೇ ಪೀಠಾಧಿಪತಿಯಾಗಿದ್ದಾರೆ. ಹಾವಗಿಲಿಂಗೇಶ್ವರ ಶಿವಾಚಾರ್ಯರು 14ನೇ ಪೀಠಾಧಿಪತಿಯಾಗಲಿದ್ದಾರೆ. ಮಠ ನೆರೆಯ ಮಹಾರಾಷ್ಟ್ರದ ತುಳಜಾಪುರ ತಾಲ್ಲೂಕಿನ ಹಂಗರಗಾದಲ್ಲಿ ಶಾಖಾ ಮಠವನ್ನು ಹೊಂದಿದೆ.
ಹಾವಗಿಲಿಂಗೇಶ್ವರ ಶಿವಾಚಾರ್ಯರು ಹಲಬರ್ಗಾ ಮಠ, ಹೈದರಾಬಾದ್‍ನ ನಾಗಲಿಂಗೇಶ್ವರ ಮಠ, ಶಿವಣಿಯ ಹಾವಗಿ ಸ್ವಾಮಿ ಮಠ, ನಿಜಾಂಪುರದ ಕುಮಾರ ಆಶ್ರಮ ಮಠ, ಔರಾದ್ ತಾಲ್ಲೂಕಿನ ಬೋರಾಳ ಮಠಗಳ ಪೀಠಾಧಿಪತಿಯಾಗಿದ್ದಾರೆ.
ಹಾವಗಿಲಿಂಗೇಶ್ವರ ಶಿವಾಚಾರ್ಯರು ಕ್ರಿಯಾಶೀಲ ಸ್ವಾಮೀಜಿಯಾಗಿದ್ದಾರೆ. ಮಠವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಅಭಿವೃದ್ಧಿಯತ್ತ ಒಯ್ಯಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಕೇದಾರಲಿಂಗ ಶಿವಾಚಾರ್ಯ, ಕೌಠಾ(ಬಿ)ದ ಅಮೃತ ಮುತ್ತ್ಯಾ ಮತ್ತಿತರರು ಇದ್ದರು.