ಬೀದರ್: ಇಲ್ಲಿಯ ಕೃಷ್ಣ ದರ್ಶಿನಿ ಸಭಾಂಗಣದಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದಿಂದ ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ ಸೇರಿದಂತೆ ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಅಮ್ಮ ಅನ್ನಪೂರ್ಣೇಶ್ವರಿ ಪ್ರಶಸ್ತಿ, ರಾಣಿ ಸತ್ಯಮೂರ್ತಿ, ಭಾಗೀರಥಿ ಕೊಂಡಾ, ಮಂಗಲಾ ಭಾಗವತ್, ಪುಣ್ಯವತಿ ವಿಸಾಜಿ, ಡಾ. ಸುನೀತಾ ಕೂಡ್ಲಿಕರ್, ಸುಷ್ಮಿತಾ ಮೋರೆ, ಸುನೀತಾ ಜೀರೋಬೆ, ಮಲ್ಲಮ್ಮ ಸಂತಾಜಿ, ಸ್ಫೂರ್ತಿ ಧನ್ನೂರ, ಗೀತಾ ಶ್ರೀಗರಿ, ಹೇಮಲತಾ ವೀರಶೆಟ್ಟಿ ಅವರಿಗೆ ಸಂಚಿ ಹೊನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂಬುದ್ದಕ್ಕೆ ರಾಜ್ಯ ಮಹಿಳಾ ಕಾರ್ಯಪಡೆಯ ಮಾಜಿ ಅಧ್ಯಕ್ಷೆಯೂ ಆದ ಗುರಮ್ಮ ಸಿದ್ದಾರೆಡ್ಡಿ ನಿದರ್ಶನವಾಗಿದ್ದಾರೆ. ಅವರ ಸಾಧನೆ ಹಾಗೂ ಸಮಾಜ ಸೇವೆಯಿಂದ ಮಹಿಳೆಯರು ಪ್ರೇರಣೆ ಪಡೆಯಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಹೇಳಿದರು.

ಗುರಮ್ಮ ಅವರು 80ನೇ ವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದಾರೆ. ಸಮಾಜಕ್ಕೆ ಕೈಲಾದ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಮಾಜ ಇನ್ನೂ ಶೋಷಣೆ ಮುಕ್ತವಾಗಿಲ್ಲ. ಈಗಲೂ ಅನೇಕ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶೋಷಣೆ ಮುಕ್ತ, ಸಮಾನತೆ ಹಾಗೂ ಮಹಿಳಾ ಸ್ವಾವಲಂಬನೆಯ ಸಮಾಜ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಮಾತನಾಡಿ, ಮಹಿಳೆಯರು ಪರಸ್ಪರ ಸಹಕಾರದಿಂದಲೂ ಸಾಧನೆ ಮಾಡಬಹುದು ಎಂದು ತಿಳಿಸಿದರು.
ವಿದ್ಯಾವತಿ ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪ್ರತಿನಿಧಿ ಜಯದೇವಿ ಯದಲಾಪುರೆ, ಬಸವ ಕೇಂದ್ರದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ವಿದ್ಯಾರಣ್ಯ ಪ್ರೌಢಶಾಲೆ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಇದ್ದರು.
ರೇಖಾ ಅಪ್ಪಾರಾವ್ ಸೌದಿ ನಾಡಗೀತೆ ಹಾಡಿದರು. ಸ್ವರೂಪರಾಣಿ ನಾಗೂರೆ ಸ್ವಾಗತಿಸಿದರು. ರೂಪಾ ಪಾಟೀಲ ನಿರೂಪಿಸಿದರು. ಡಾ. ಶ್ರೇಯಾ ಮಹೇಂದ್ರಕರ್ ವಂದಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
—————-