ಬೀದರ್ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರ ವಿಚಾರಧಾರೆಗಳು ಇಡೀ ಮಾನವ ಕುಲಕ್ಕೆ ದಾರಿದೀಪವಾಗಿದೆ ಎಂದು ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಹಣಸಿನಕೋಳ ಮಠ ಯಮಕನಮರಡಿಯ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ಸಿದ್ಧಬಸವ ದೇವರು ತಿಳಿಸಿದರು.
ಆಲ್ ಇಂಡಿಯಾ ಪ್ಯಾಂಥರ್ ಸೇನಾ ಬೀದರ ವತಿಯಿಂದ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ ಚೌಡಾರ್ ಕೆರೆಯ ಸತ್ಯಾಗ್ರಹ ದಿನದ ಅಂಗವಾಗಿ ಸಾಮಾಜಿಕ ಸಬಲೀಕರಣ ದಿನಂದು ಬೃಹತ್ ಬಹಿರಂಗ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರಾಕೃತಿಕ ದತ್ತವಾದ ಸಿಹಿನೀರನ್ನು ಕುಡಿಯಲು ಅಂದು ದಲಿತರಿಗಾಗಿ ಬಾಬಾ ಸಾಹೇಬರು ಸಾಕಷ್ಟು ಹೋರಾಟ ಮಾಡಿದ್ದರು ಎಂದರೆ ಅಂದು ಕೆಳವರ್ಗದವರ ಪರಿಸ್ಥಿತಿ ಎಂತಹ ದಯನೀಯವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಿ. ಗುಲಾಮರನ್ನು ಯಾವಾಗ ದಲಿತರು ಗುಲಾಮರನ್ನಾಗಿ ಮಾಡಿಕೊಳ್ಳುವರೋ ಅಂದೇ ಈ ದೇಶದಲ್ಲಿ ದಲಿತರಿಗೆ ಸಮಾನತೆ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮುಂಬಯಿಯ ಡಾ. ರಾಜರತನ ಅಶೋಕರಾವ ಅಂಬೇಡ್ಕರ್ ಅವರು ಮಾತನಾಡಿ ಡಾ. ಬಾಬಾ ಸಾಹೇಬರು ಎಂದೂ ಕೂಡಾ ತನ್ನ ಹಾಗೂ ಕುಟುಂಬದ ಬಗ್ಗೆ ವಿಚಾರ ಮಾಡಲಿಲ್ಲ. ಬದಲಾಗಿ ಸಮಾನತೆಗಾಗಿ ಜನರನ್ನು ಹೋರಾಟದಲ್ಲಿ ಧುಮುಕಿಸುವ ವಿಚಾರ ಮಾಡಿದ್ದರು. ಚಳುವಳಿಯೆಂಬ ಕಂಭ ನೆಟ್ಟು ಹೋಗುತ್ತಿದ್ದೇನೆ. ಆದರೆ ಎಲ್ಲಿ ನೀವು ಅದನ್ನು ಬೀಳಿಸುವಿರೋ ಎಂಬ ಭಯ ನನಗಿದೆ. ಆದರೆ ಅದನ್ನು ಬೀಳಿಸದಂತೆ ನೋಡಿಕೊಳ್ಳಿ ಎಂದು ಬಾಬಾ ಸಾಹೇಬರು ಕೊನೆಯ ಭಾಷಣದಲ್ಲಿ ಹೇಳಿದ್ದರು ಎಂದು ಅಂಬೇಡ್ಕರರ ಮಾತುಗಳನ್ನು ಸ್ಮರಿಸಿದರು.
ಪೌರಾಡಳಿತ ಸಚಿವ ರಹಿಂಖಾನ್ ಅವರು ಮಾತನಾಡಿ ಭಾರತದಲ್ಲಿ ಇಂದು ಒಬ್ಬ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನಮಂತ್ರಿವರೆಗೆ ಅಧಿಕಾರ ಅನುಭವಿಸುತ್ತಿದ್ದಾರೆ ಎಂದರೆ ಅದು ಸಂವಿಧಾನದ ಕೃಪೆಯಿಂದ. ಅಂತಹ ಭಾರತದ ಸಂವಿಧಾನವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರಲ್ಲದೆ ಈ ಕಾರ್ಯಕ್ರಮದಲ್ಲಿ ಕೇಳಿದ ಉಪನ್ಯಾಸ ಕೇವಲ ಕೇಳದೆ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋರಾಟದಲ್ಲಿ ಧುಮುಕಬೇಕೆಂದು ಸಲಹೆ ನೀಡಿದರು.
ಆಲ್ ಇಂಡಿಯಾ ಪ್ಯಾಂಥರ್ ಸೇನಾದ ರಾಷ್ಟಿಯ ಅಧ್ಯಕ್ಷ ದೀಪಕ ಕೇದಾರ ಮಾತನಾಡಿ ಇತ್ತಿಚಿಗೆ ರಾಷ್ಟಿಯ ದಲಿತ ನಾಯಕರ ಮೇಲೆ ಅನ್ಯಾಯವಾಗುತ್ತಿದೆ. ಡಾ. ಬಾಬಾ ಸಾಹೇಬರು ಹಾಗೂ ವಿಶ್ವಗುರು ಬಸವೇಶ್ವರರ ಪುತ್ಥಳಿಗಳಿಗೆ ಅವಮಾನವಾಗುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲೆಯಲ್ಲಿಯೂ ಈ ರೀತಿಯ ವಾತಾವರಣ ನಿರ್ಮಾಣವಾದರೂ ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಬರೀ ದಲಿತರ ಮತ ಪಡೆದರೆ ಸಾಲದು ಬದಲಾಗಿ ದಲಿತರ ಸಂರಕ್ಷಣೆಯೂ ನಿಮ್ಮ ಜವಾಬ್ದಾರಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಆಲ್ ಇಂಡಿಯಾ ಪ್ಯಾಂಥರ್ ಸೇನೆಯ ಜಿಲ್ಲಾಧ್ಯಕ್ಷ ಭರತ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಯುವಕರು ಜಾಗೃತರಾಗಿ, ಸಂಘಟಕರಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ಈ ಸಂಘಟನೆಗೆ ಕೈಜೋಡಿಸಿ ಮುಂದಿನ ಬದಲಾವಣೆಗಾಗಿ ಕೈಜೋಡಿಸಬೇಕೆಂದು ಕರೆ ಕೊಟ್ಟರು.
ತುಕಾರಾಮ ಕರಾಟೆ ಸ್ವಾಗತಿಸಿದರು. ಅಂಬಾದಾಸ ಗಾಯಕವಾಡ ನಿರೂಪಿಸಿದರು. ಸೇನೆಯ ಕಾರ್ಯಾಧ್ಯಕ್ಷ ದೇವರಾಜ ಆರ್ಯ ವಂದಿಸಿದರು. ವೇದಿಕೆ ಮೇಲೆ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು, ಪೂಜ್ಯ ಧಮ್ಮಾನಂದ ಥೆರೋ ಆಣದೂರ, ಮಾಜಿ ಸಚಿವ ಬಂಡೆಪ್ಪ ಖಾಶೇಂಪೂರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷö್ಮಣರಾವ ಬುಳ್ಳಾ, ಸೇನೆಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಅಮೃತರಾವ ಚಿಮಕೊಡೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೆಖರ ಬಿರಾದಾರ ಚಿದ್ರಿ, ದಿಲೀಪ ಶಿಂಧೆ, ಗೌರವಾಧ್ಯಕ್ಷ ದೇವೇಂದ್ರ ಸೋನಿ, ಬಸವರಾಜ ಕಾಂಬಳೆ, ಮುಖಂಡ ಪ್ರದೀಪ ಜಂಜೀರೆ, ಕೃಷ್ಣ ನಾಟೇಕಾರ, ಸಂಗಪ್ಪ ಚಿದ್ರಿ, ಸಂತೋಷ ಕಾಂಬಳೆ, ಸುಜೀತ್ ಬಡಿಗೇರ್, ಎಲ್ಲೇಶ ಮಲ್ಕಾಪುರ, ಆನಂದ ಖಾಶೇಂಪೂರ, ಸೂರ್ಯಕಾಂತ ಯಕಾತಪುರ, ಓಂಪ್ರಕಾಶ ಕಾಂಬಳೆ, ರಾಜರತನ ಶಿಂಧೆ, ಭಾಗ್ಯಶಾಲ್ ಕಾಂಬಳೆ, ಶಾಮರಾವ ಮಲ್ಕಾಪುರೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
——————