ಬೀದರ್ : ಅಷ್ಟೂರ ಗ್ರಾಮದ ಅಲ್ಲಮಪ್ರಭು ದೇವರ ಬಳಿ ಯಾವುದೇ ಭೇದಭಾವ ಇಲ್ಲ. ಜಾತಿ, ಧರ್ಮದ ಭೇದಭಾವ ಮಾಡದೇ ಸಹಸ್ರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಷ್ಟೂರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಅಲ್ಲಮಪ್ರಭು ದೇವರ ದರ್ಗಾದ ಆವರಣದಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀ ಅಲ್ಲಮಪ್ರಭು ದೇವರ ಜಾತ್ರಾ ಮಹೋತ್ಸವ & ಸಾಂಸ್ಕೃತಿಕ ಕಾರ್ಯಕ್ರಮ (ಉರ್ಸ್ / ಸಂದಲ್) ದಲ್ಲಿ ಪಾಲ್ಗೊಂಡು, ದರ್ಶನ ಪಡೆದು ಅವರು ಮಾತನಾಡಿದರು.
ಅಲ್ಲಮಪ್ರಭು ದೇವರ ಬಳಿ ಎಲ್ಲರೂ ಒಂದೇ. ಇಲ್ಲಿ ಅದು ಇದು, ಆ ಜಾತಿ ಈ ಜಾತಿ ಎಂಬ ಯಾವುದೇ ಭೇದಭಾವ ಇರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಇಲ್ಲಿ ಒಂದೇ ರೀತಿಯಲ್ಲಿ ಕಾಣಲಾಗುತ್ತದೆ. ಎಲ್ಲಾ ಸಮಾಜದವರು ಸೇರಿ ಈ ಜಾತ್ರೆ ಮಾಡುತ್ತಾರೆ. ಇದು ಬಹಳಷ್ಟು ಸಂತಸದ ವಿಷಯವಾಗಿದೆ.

ನಮ್ಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ದರ್ಗಾಗಳಿವೆ. ಅಲ್ಲಿ ವರ್ಷಕ್ಕೊಮ್ಮೆ ಉರ್ಸ್ ಆಗುತ್ತದೆ. ಎಲ್ಲಾ ಜಾತಿ, ಧರ್ಮಗಳ ಜನರು ಒಗ್ಗಟ್ಟಿನಿಂದ ಉರ್ಸ್ ಮಾಡುತ್ತಾರೆ. ಅದರಂತೆ ಅಷ್ಟೂರ ಗ್ರಾಮದ ಮುಖಂಡರಲ್ಲಿ ಒಗ್ಗಟ್ಟಿದೆ. ಅವರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.
ನಮ್ಮ ಭಾಗದ ಜನರು ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಅಷ್ಟೂರ ಅಲ್ಲಮಪ್ರಭು ದೇವರ ಜಾತ್ರೆಯಲ್ಲಿ ಐತಿಹಾಸಿಕ ಕುಸ್ತಿ ಕಾರ್ಯಕ್ರಮ ನಡೆಯುತ್ತದೆ. ಅಷ್ಟೂರ ಕುಸ್ತಿ ಅಂದ್ರೆ ಪಕ್ಕದ ಮಹಾರಾಷ್ಟ್ರದಿಂದ ಕೂಡ ಕುಸ್ತಿಪಟುಗಳು ಬರುತ್ತಾರೆ.
ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬಂದಿರುವ ಪರಂಪರೆಯನ್ನು ಇವತ್ತಿಗೂ ನಮ್ಮ ಜನ ಕಾಪಾಡಿಕೊಂಡು ಬರುತ್ತಿದ್ದಾರೆ. ಅದೇ ನಮ್ಮ ಭಾರತದ ಸಂಸ್ಕೃತಿ ಮತ್ತು ಸಭ್ಯತೆ ಎನ್ನಬಹುದಾಗಿದೆ. ಇದು ಬೇರೆ ಕಡೆ ಎಲ್ಲಿಯೂ ಸಿಗುವುದಿಲ್ಲ ಎಂದು ಭಾರತೀಯ ಸಂಸ್ಕೃತಿ, ಪರಂಪರೆಯ ಇತಿಹಾಸವನ್ನು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮೆಲುಕು ಹಾಕಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಾಡ್ಯಾಳದ ಸೋಮಶೇಖರ್ ಒಡೆಯರ್, ಹೆಬ್ಬಳ್ಳಿಯ ಶ್ರೀಮಂತ ಧರ್ಮಣ್ಣ ಒಡೆಯರ್, ಖಟಕ್ ಚಿಂಚೋಳಿ ಹಿರೇಮಠದ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪಂಡಿತರಾವ್ ಚಿದ್ರಿ, ಗೀತಾ ಪಂಡಿತರಾವ್ ಚಿದ್ರಿ, ಬಾಬುರಾವ್ ಮಲ್ಕಾಪೂರೆ, ಪ್ರಕಾಶ್ ಪಾಟೀಲ್, ಶಶಿಧರ್ ಪಾಟೀಲ್, ಶಿವಕುಮಾರ್ ನಾಗಲಗಿದ್ದಿ, ಅರ್ಜುನ್ ಕಾಳಗೊಂಡ, ರಾಹುಲ್ ಮೊರೆ, ಸಂಗಶೆಟ್ಟಿ ರಾಮತೀರ್ಥ, ಉಮೇಶ್ ರತನಗೊಂಡ, ಮಹಮ್ಮದ್ ಕುದ್ದುಸ್, ಮಹಮ್ಮದ್ ಪಿರೋಜ್, ಬಾಬುರಾವ್ ನಾಗಲಗಿದ್ದಿ, ಸುನೀಲ್ ಬೌದ್ಧೆ, ಬಸಯ್ಯಸ್ವಾಮಿ, ಲೋಕೇಶ್ ಜಾಂತೆ, ಉಮೇಶ್ ಮೇತ್ರೆ, ಮಾರ್ಟಿನ್ ಸೇರಿದಂತೆ ಅನೇಕರಿದ್ದರು.
———————