ಬೀದರ್ : ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದಂತೆ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಸಾಕಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಮಾರ್ಚ್ 25ರಂದು ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆಯ ಕುರಿತು ಪಂಚಾಯಿತಿ ಅಧಿಕಾರಿಗಳಿಂದ ಗ್ರಾಮವಾರು ಮಾಹಿತಿ ಪಡೆದ ಶಾಸಕರು, ಪ್ರತಿದಿನ ಒಂದಿಲ್ಲೊಂದು ಗ್ರಾಮದ ಜನರು ನೀರಿನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಛೇರಿಯಲ್ಲಿ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಖಾಸಗಿ ಬೋರ್‌ವೆಲ್ ಇಲ್ಲವೇ ಹೊಸ ಬೋರ್‌ವೆಲ್ ಕೊರೆಸಿ ನೀರು ಸರಬರಾಜು ಮಾಡಬೇಕು. ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸಬೇಕು. ಸಮಸ್ಯೆಯ ತೀವ್ರತೆ ಹೆಚ್ಚಿರುವ ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದ್ಯತೆ ಕೊಡಬೇಕೆಂದು ಹೇಳಿದರು.
ಇನ್ನೆರಡು ತಿಂಗಳು ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಒಳಗೊಂಡು ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಕೇಂಧ್ರದಲ್ಲಿ ವಾಸ್ತವ್ಯ ಮಾಡಬೇಕು. ಎಲ್ಲರೂ ತಮ್ಮ ಮೊಬೈಲ್ ಫೋನ್‌ಗಳನ್ನು ಚಾಲ್ತಿಯಲ್ಲಿಡಬೇಕು. ಸಾರ್ವಜನಿಕರ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ಎಲ್ಲಿಯೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆದರೆ ಇಷ್ಟೊಂದು ಸಮಸ್ಯೆ ಇರುತ್ತಿರಲಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕಾರಣದಿಂದಾಗಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಈ ಯೋಜನೆಯಡಿ ಅವಕಾಶವಿರುವ ಕಡೆ ಹೊಸ ಬಾವಿ, ಕೊಳವೆಬಾವಿ ಕೊರೆಸಿಕೊಳ್ಳಬೇಕು. ಕೆಲವು ಕಡೆ ಜೆಸ್ಕಾಂನಿAದ ಕೆಲಸ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ ಕುಡಿಯುವ ನೀರಿನ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕು. ಈ ವಿಷಯದಲ್ಲಿ ವಿಳಂಬಕ್ಕೆ ಆಸ್ಪದ ಕೊಡಬಾರದೆಂದು ಜೆಸ್ಕಾಂ ಅಧಿಕಾರಿಗೆ ತಿಳಿಸಿದರು.
ವಸತಿ ಯೋಜನೆಯ ಕುರಿತು ಪ್ರಗತಿ ಪರಿಶೀಲನೆ ನಡಸಿದ ಶಾಸಕರು, ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಗುರಿ ನಿಗದಿಪಡಿಸಲಾಗಿದೆ. ಮಾಸಾಂತ್ಯದೊಳಗೆ ಪ್ರಗತಿ ಕೆಲಸ ಕಾಣಿಸಬೇಕು. ವಸತಿ ರಹಿತ ಕಡುಬಡವರಿಗೆ ಮನೆಗಳನ್ನು ಒದಗಿಸಬೇಕೆಂದು. ಈ ವಿಷಯದಲ್ಲಿ ನಿರ್ಲಕ್ಷ ವಹಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಇಓಗೆ ನಿರ್ದೇಶನ ನೀಡಿದರು.
ಔರಾದ(ಬಿ) ಪಟ್ಟಣದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಗಂಭೀರತೆಯಿAದ ಕೆಲಸ ಮಾಡಬೇಕು. ಯಾವೊಂದು ವಾರ್ಡ್ನಲ್ಲಿಯೂ ನೀರಿನ ಕೊರತೆಯಾಗಬಾರದೆಂದು ಹೇಳಿದರು.
ಬಿಲ್ ಪಾವತಿಯಲ್ಲಿ ಲೋಪ-ಅಧಿಕಾರಿಗಳು ತರಾಟೆಗೆ: ಜಲ ಜೀವನ್ ಮಿಷನ್ ಯೋಜನೆ(ಜೆಜೆಎಂ) ಅಡಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕಡಿಮೆ ಕೆಲಸವಾದರೂ ಗುತ್ತಿಗೆದಾರರಿಗೆ ಹೆಚ್ಚಿನ ಬಿಲ್ ಪಾವತಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಖೇರ್ಡಾ(ಬಿ)ನಲ್ಲಿ ಶೇ.30ರಷ್ಟು ಮಾತ್ರ ಕೆಲಸವಾಗಿದ್ದು, ಶೇ.70ರಷ್ಟು ಬಿಲ್ ಪಾವತಿಸಲಾಗಿದೆ. ಸಾವರಗಾಂವನಲ್ಲಿ ಶೇ.40ರಷ್ಟು ಕೆಲಸವಾದರೆ ಬಿಲ್ ಶೇ.60ರಷ್ಟು ಪಾವತಿಸಲಾಗಿದೆ. ಅದರಂತೆ ಹುಲ್ಯಾಳ, ಬಾವಲಗಾಂವ, ಹೊಕ್ರಾಣಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆಲಸ ಕಡಿಮೆಯಾದರೂ ಹೆಚ್ಚಿನ ಬಿಲ್ ಪಾವತಿಸಿರುವುದನ್ನು ಗಮನಕ್ಕೆ ಬರುತ್ತಿದ್ದಂತೆ ಶಾಸಕರು ಅಧಿಕಾರಿಗಳ ವಿರುದ್ಧ ಕೆಂಡಾಮAಡಲರಾದರು. ನೀವು ಹೀಗೆ ಮಾಡುವುದರಿಂದಲೇ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಂಬಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸೂಚಿಸಿದರು.
ಔರಾದ(ಬಿ) ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಣಿಕರಾವ ಕೆರೂರ್, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಕಾರಭಾರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
——————-