Friday, May 23, 2025
Homeಭಕ್ತಿಸಂಸ್ಮರಣೆ ಕಾರ್ಯಕ್ರಮದಲ್ಲಿ ಹುಲಸೂರು ಶ್ರೀ ಹೇಳಿಕೆ ಬಸವ ತತ್ವ ಬೆಳೆಸಿದ್ದ ಮಾತಾಜಿ

ಸಂಸ್ಮರಣೆ ಕಾರ್ಯಕ್ರಮದಲ್ಲಿ ಹುಲಸೂರು ಶ್ರೀ ಹೇಳಿಕೆ ಬಸವ ತತ್ವ ಬೆಳೆಸಿದ್ದ ಮಾತಾಜಿ

ಬೀದರ್: 21ನೇ ಶತಮಾನದಲ್ಲಿ ಕರ್ನಾಟಕದಾದ್ಯಂತ ಬಸವ ತತ್ವವನ್ನು ಪ್ರಭಾವಶಾಲಿಯಾಗಿ ಬೆಳೆಸಿದ್ದ ಶ್ರೇಯ ಜಗದ್ಗುರು ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಜಗದ್ಗುರು ಮಾತೆ ಮಹಾದೇವಿ ಸಂಸ್ಮರಣೆ ಕಾರ್ಯಕ್ರಮ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮಾಸಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಾತಾಜಿ ಅವರು ಬಸವ ತತ್ವ ಪ್ರಚಾರಕ್ಕೆ ಹೊಸ ಆಯಾಮ ನೀಡಿದ್ದರು. ಅವರಿಂದ ಪ್ರೇರಣೆ ಪಡೆದ ಅನೇಕರು ಇಂದು ಬಸವ ತತ್ವ ಪ್ರಚಾರಕರಾಗಿದ್ದಾರೆ ಎಂದು ತಿಳಿಸಿದರು.
ಇಂದು ಎಲ್ಲ ಬಸವ ಪರ ಸಂಘಟನೆಗಳು ಒಂದಾಗಿ, ಒಮ್ಮನಸ್ಸಿನಿಂದ ಬಸವಣ್ಣನವರ ತೇರು ಎಳೆಯಬೇಕಾಗಿದೆ ಎಂದರು.
ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರು ಲಿಂಗಾಯತ ಧರ್ಮದ ಗುರು ಎಂದು ಹೆಚ್ಚು ಪ್ರಚಾರ ಮಾಡಿದ ಕೀರ್ತಿ ಮಾತೆ ಮಹಾದೇವಿ ಅವರದ್ದು ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಮಹಾಸಭಾದಿಂದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಬಸವ ತತ್ವದ ಕುರಿತ ಚಿಂತನ- ಮಂಥನದ ‘ವಚನ ಮಂಟಪ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಸವಾದಿ ಶರಣರ ತತ್ವಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಬಸವ ಜಯಂತಿಯ ನಂತರ ನಗರದಲ್ಲಿ ಮಹಾಸಭಾದಿಂದ ಪ್ರಕಟಿಸಲಾದ ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಮಹಾಸಭಾ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಸಿದ್ದಯ್ಯ ಕಾವಡಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಖಜಾಂಚಿ ವೀರಭದ್ರಪ್ಪ ಬುಯ್ಯಾ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ತೊಂಡಾರೆ, ವಕೀಲ ಗಂಗಶೆಟ್ಟಿ ಪಾಟೀಲ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಆನಂದ ದೇವಪ್ಪ, ಬಸವರಾಜ ಭತಮುರ್ಗೆ, ಬಸವರಾಜ ಪಾಟೀಲ ಹಾರೂರಗೇರಿ, ಬಾಬುರಾವ್ ದಾನಿ, ಕಂಟೆಪ್ಪ ಗಂದಿಗುಡಿ, ಸುವರ್ಣಾ ಧನ್ನೂರ, ನೀಲಮ್ಮ ರೂಗನ್, ಸಂಜುಕುಮಾರ ಪಾಟೀಲ, ಗಣೇಶ ಬಿರಾದಾರ, ರವಿ ಪಾಪಡೆ, ಮಲ್ಲಿಕಾರ್ಜುನ ಪಂಚಾಕ್ಷರಿ ಉಪಸ್ಥಿತರಿದ್ದರು.
ಲಕ್ಷ್ಮಿ ಬಿರಾದಾರ ವಚನ ಗಾಯನ ನಡೆಸಿಕೊಟ್ಟರು. ಜಯದೇವಿ ಯದಲಾಪುರೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಸುರೇಶ ಸ್ವಾಮಿ ವಂದಿಸಿದರು.
————-
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3