ಬೀದರ್: ಕೋವಿಡ್ ನಿರ್ವಹಣೆಯಲ್ಲಿ ಪಾರಂಪರಿಕ ವೈದ್ಯರ ಪಾತ್ರ ಬಹಳಷ್ಟಿದೆ ಎಂದು ರಾಜ್ಯದ ಅರಣ್ಯ, ಪರಿಸರ, ಜೀವಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ವೈದ್ಯ ಪರಿಷತ್ತು, ಕರ್ನಾಟಕ ಜೀವವೈವಿಧ್ಯ ಮಂಡಳಿ, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇತ್ತಿಚಿಗೆ ನಗರದಲ್ಲಿ ಜರುಗಿದ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ಯಶಸ್ವಿಗಾಗಿ ದುಡಿದವರಿಗೆ ಭಾನುವಾರ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಯುರ್ವೇದದ ಕುರಿತು ಜ್ಞಾನವೃದ್ಧಿ, ಸಸ್ಯ ಹಾಗೂ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸಂರಕ್ಷಣೆ ಸಂವೃದ್ಧಿಗಾಗಿ ನಾಟಿ ವೈದ್ಯ ಸಮ್ಮೇಳನ ಪೂರಕವಾಗಿತ್ತು. ನಮ್ಮ ನಿರೀಕ್ಷೆಗೂ ಮೀರಿ ಎಲ್ಲರ ಪ್ರಯತ್ನದಿಂದ ಸಮ್ಮೇಳನ ಯಶಸ್ವಿ ಕಂಡಿದೆ. ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ತಂಡದವರು ಸಾಕಷ್ಟು ದುಡಿದಿದ್ದಾರೆ. ವೈದ್ಯರಿಗೆ ದೇವರ ಸಮಾನ ಎಂದು ಹೇಳುತ್ತೇವೆ. ಸಮಾಜದಲ್ಲಿ ಅವರಿಗೆ ದೊಡ್ಡ ಸ್ಥಾನಮಾನವಿದೆ.
ಕಾಯಿಲೆಗಳು ದಿನೇ ದಿನೇ ಜಾಸ್ತಿಯಾಗಿರುತ್ತಿರುವ ಇಂದಿನ ಕಾಲದಲ್ಲಿ ಪಾರಂಪರಿಕ ವೈದ್ಯರ ಪಾತ್ರ ಬಹುಮುಖ್ಯವಾಗಿದೆ. ಜೀವಸಂಕುಲ, ಸಸ್ಯ ಸಂಕುಲ, ಪ್ರಾಣಿ ಸಂಕುಲ ಭೂಮಿ ಮೇಲಿವೆ. ಇವುಗಳನ್ನುಉಳಿಸುವುದರ ಜೊತೆಗೆ ಅರಣ್ಯ ಸಂಪತ್ತು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾವ ಸಸ್ಯದಲ್ಲಿ ಯಾವ ಔಷಧೀಯ ಗುಣವಿದೆ ಎಂಬುದನ್ನು ಕಂಡು ಹಿಡಿದು ಜನರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುವ ಕಲೆ ನಾಟಿವೈದ್ಯರಲ್ಲಿದೆ. ಈ ಜ್ಞಾನವನ್ನು ಸಮ್ಮೇಳನದ ವಿವಿಧ ಗೋಷ್ಠಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ನನ್ನದಾಗಿತ್ತು. ಅದು ಸಾಕಾರಗೊಂಡಿದೆ. ಸಮ್ಮೇಳನದ ಯಶಸ್ವಿಗೆ ಹಗಲು ರಾತ್ರಿ ದುಡಿದ ಎಲ್ಲಾ ಸಾಧಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ಮಹಾದೇವಯ್ಯ ಮಾತನಾಡಿ ರಾಜ್ಯದ ಮನೆಮನೆಗಳಲ್ಲಿ ಮನೆಮದ್ದು ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಇದರಿಂದ ಪಾರಂಪರಿಕ ವೈದ್ಯ ಪದ್ಧತಿ ಪ್ರಚುರಪಡಿಸಿದಂತಾಗುತ್ತದೆ. ಆಯುರ್ವೇದದ ಜ್ಞಾನ ಎಲ್ಲರಿಗೂ ನೀಡಿದಂತಾಗುತ್ತದೆ. ನಮ್ಮ ಪರಿಷತ್ತಿನ ವತಿಯಿಂದಲೂ ಪ್ರತಿ ಮನೆಗೂ ನಾಟಿಔಷಧಿ ಜ್ಞಾನ ನೀಡಲು ನಾವು ಪ್ರಯತ್ನಿಸುತ್ತೇವೆ. ಬೀದರ ಪಾರಂಪರಿಕ ವೈದ್ಯ ಸಮ್ಮೇಳನದಿಂದ ನಮಗೂ ತರಬೇತಿ ಸಿಕ್ಕಿದಂತಾಗಿದೆ. ಸದ್ಯ ಕರ್ನಾಟಕ ಸರ್ಕಾರದಲ್ಲಿ ಪಾರಂಪರಿಕ ವೈದ್ಯರಿಗೆ ಎರಡೇ ಹುದ್ದೆಗಳಿವೆ. ಆದರೆ ಅದನ್ನು 2% ಕ್ಕೆ ಏರಿಸಬೇಕೆಂದು ತಿಳಿಸಿದರು.
ಪಾರಂಪರಿಕ ವೈದ್ಯ ಸಮ್ಮೇಳನದ ಸಂಯೋಜಕರಾದ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಕರ್ನಾಟಕ ಜಾನಪದ ಸಮ್ಮೇಳನದ ಬಳಿಕ ಜಿಲ್ಲೆಯಲ್ಲಿ ಈ ಸಮ್ಮೇಳನ ಐತಿಹಾಸಿಕವಾಗಿ ಕಾರ್ಯಗತವಾಗಿದೆ. ಮುಂದಿನ ದಿನಗಳಲ್ಲಿ ಸಾರ್ಕ್ ಕಲಾವಿದರನ್ನು ಬೀದರಗೆ ಕರೆಸಿ ಅಂತರಾಷ್ಟಿçÃಯ ಜಾನಪದ ಸಮ್ಮೇಳನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸಚಿವರಾದಿಯಾಗಿ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಡಾ. ಎ.ಬಿ.ಪಾಟೀಲ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಡಾ. ವಿದ್ಯಾ ಪಾಟೀಲ ವಂದಿಸಿದರು. ವೇದಿಕೆ ಮೇಲೆ ಡಾ. ಗುರಮ್ಮಾ ಸಿದ್ದಾರೆಡ್ಡಿ, ಡಾ. ಅಬ್ದುಲ್ ಖದೀರ್, ಡಾ. ಯು.ಸಿ.ಪಾಟೀಲ, ಚಂದ್ರಶೇಖರ ಹೆಬ್ಬಾಳೆ, ವೀರಶೆಟ್ಟಿ ಮಣಗೆ, ಮಡಿವಾಳಪ್ಪ ಮಂಗಲಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
——————-