Saturday, May 24, 2025
Homeಬೀದರ್ವಿಶ್ವ ಕ್ಷಯ ರೋಗ ದಿನಾಚರಣೆ: ಜಿ.ಪಂ. ಸಿಇಒ ಹೇಳಿಕೆ ಕ್ಷಯ ರೋಗ ಮುಕ್ತ ಭಾರತಕ್ಕೆ ಕೈಜೋಡಿಸಿ

ವಿಶ್ವ ಕ್ಷಯ ರೋಗ ದಿನಾಚರಣೆ: ಜಿ.ಪಂ. ಸಿಇಒ ಹೇಳಿಕೆ ಕ್ಷಯ ರೋಗ ಮುಕ್ತ ಭಾರತಕ್ಕೆ ಕೈಜೋಡಿಸಿ

ಬೀದರ್: ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಬ್ರಿಮ್ಸ್‍ನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 2025 ರಲ್ಲಿ ದೇಶವನ್ನು ಸಂಪೂರ್ಣ ಕ್ಷಯ ರೋಗ ಮುಕ್ತವಾಗಿಸುವ ಘೋಷಣೆ ಮಾಡಿದೆ. ಈ ದಿಸೆಯಲ್ಲಿ ಕಾರ್ಯ ಚಟುವಟಿಕೆಗಳೂ ನಡೆದಿವೆ ಎಂದು ತಿಳಿಸಿದರು.
ಕ್ಷಯ ರೋಗ ನಿರ್ಮೂಲನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಯ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ ಕ್ಷಯ ರೋಗ ನಿಯಂತ್ರಣದಲ್ಲಿ ಜಿಲ್ಲೆ ಗಣನೀಯ ಪ್ರಗತಿ ಸಾಧಿಸಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ತಿಳಿಸಿದರು.
ಈಗ ಹ್ಯಾಂಡ್ ಹೆಲ್ಡ್ ಕ್ಷ ಕಿರಣ ಯಂತ್ರದೊಂದಿಗೆ ರೋಗಿಗಳು ಇರುವ ಗ್ರಾಮ, ಸಂತೆ, ಜಾತ್ರೆ, ಉತ್ಸವ ಮೊದಲಾದ ಕಡೆಗೆ ಹೋಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ. ರೋಗ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೌಷ್ಟಿಕ ಆಹಾರಕ್ಕಾಗಿ ಕಡು ಬಡ ರೋಗಿಗಳ ಖಾತೆಗೆ ಹಣ ಸಹ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ 47,979 ಸಂಭಾವ್ಯ ಕ್ಷಯ ರೋಗಿಗಳ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 2,563 ಮಂದಿಗೆ ಕ್ಷಯ ರೋಗ ಇರುವುದು ದೃಢಪಟ್ಟಿದೆ. 71 ಜನರಲ್ಲಿ ಎಚ್‍ಐವಿ ಜತೆಗೆ ಕ್ಷಯರೋಗ ಪತ್ತೆಯಾಗಿದೆ ಎಂದು ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಅನಿಲಕುಮಾರ ಚಿಂತಾಮಣಿ ಹೇಳಿದರು.
2022 ರಲ್ಲಿ ಜಿಲ್ಲೆಯಲ್ಲಿ 2,824 ಹಾಗೂ 2023 ರಲ್ಲಿ 2,826 ಕ್ಷಯ ರೋಗಿಗಳು ಪತ್ತೆಯಾಗಿದ್ದರು. ಈ ವರ್ಷ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದರು.
ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿ ಯೋಜನೆಯಡಿ ಹೆಡಗಾಪುರ, ಹಾರಕೂಡ, ಬ್ಯಾಲಹಳ್ಳಿ, ನಿಟ್ಟೂರ (ಬಿ), ಬೇನಚಿಂಚೋಳಿ, ಏಕಲೂರು, ಕೋಹಿನೂರು, ಲಾಡವಂತಿ, ಮುಡಬಿ, ಉಜಳಂಬ, ಡಾಕುಳಗಿ, ಮದರಗಾಂವ್, ಚಟ್ನಳ್ಳಿ, ಮಾಳೆಗಾಂವ್, ಖೇಣಿ ರಂಜೋಳ್, ರೇಕುಳಗಿ, ಬೆಳಕೇರಾ, ಮೀನಕೇರಾ ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿಗಳೆಂದು ಘೋಷಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಹೆಮದ್, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಕಿರಣ ಪಾಟೀಲ, ಡಾ. ರಾಜಶೇಖರ ಪಾಟೀಲ, ಡಾ. ಶಂಕರೆಪ್ಪ ಬೊಮ್ಮಾ, ಡಾ. ದಿಲೀಪ್ ಡೊಂಗರೆ ಇದ್ದರು.
ಟಿ.ಎಂ. ಮಚ್ಚೆ ನಿರೂಪಿಸಿದರು. ಸಂಜುಕುಮಾರ ನಾಗೂರೆ ವಂದಿಸಿದರು.
ಕಾರ್ಯಕ್ರಮಕ್ಕೆ ಮುನ್ನ ನಗರದಲ್ಲಿ ಕ್ಷಯ ರೋಗ ಜಾಗೃತಿ ಜಾಥಾ ನಡೆಯಿತು.
————–
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3