ಬೀದರ್: ಈ ತಿಂಗಳ 27 ಹಾಗೂ 28 ರಂದು ರಾಜ್ಯ ರಾಜ್ಯಧಾನಿ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರಾಧ್ಯಕ್ಷರಾದ ಮಂದಾಕೃಷ್ಣ ಮಾದಿಗ ಅವರ ಮಾರ್ಗದರ್ಶನದಲ್ಲಿ ಒಳ ಮೀಸಲಾತಿ ಜಾರಿ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, 27ರಂದು ಕಾರ್ಯಾಗಾರ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಜರುಗುವುದು. 28ರಂದು ಒಳ ಮೀಸಲಾತಿ ಬೆಂಬಲಿಸುವ ಎಲ್ಲ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಹಾಲಿ, ಮಾಜಿ ಅಧಿಕಾರಿಗಳು, ಹಾಲಿ, ಮಾಜಿ ಶಾಸಕರು, ಸಚಿವರು ಜೊತೆಗೆ ಮಾದರ ಚನ್ನಯ್ಯ ಸ್ವಾಮಿಜಿಗಳು ಸೇರಿದಂತೆ ಇತರೆ ಮಠಾಧೀಶರು ಪಾಲ್ಗೊಳ್ಳುವರು. ನಂತರ ಮಧ್ಯಾಹ್ನ,ದ ಬಳಿಕ ಮುಂದಿನ ಹೋರಾಟದ ಬಗ್ಗೆ ಮಂದಾಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮೇಲಿನ ಎಲ್ಲ ಮಹನಿಯರ ಜೊತೆ ಮುಂದಿನ ಹೋರಾಟದ ಬಗ್ಗೆ ವಿಶೇಷ ಸಭೆ ಜರುಗುವುದು. ಈ ಎರಡು ದಿವಸದ ಕಾರ್ಯಾಗಾರ ಹಾಗೂ ಸಭೆಯಲ್ಲಿ ಜಿಲ್ಲೆಯ ಸಮಾಜ ಬಾಂಧವರು, ವಕಿಲರು, ಓಳ ಮೀಸಲಾತಿ ಪರ ಹೋರಾಟಗಾರರು, ಸಂಘಟನೆಗಳ ಪ್ರಮುಖರು, ಒಟ್ಟಾರೆ ಒಳ ಮೀಸಲಾತಿ ಪರ ಬೆಂಬಲಿಸುವ ಎಲ್ಲರು ಪಾಲ್ಗೊಳ್ಳಬೇಕೆಂದು ಫರ್ನಾಂಡಿಸ್ ಕರೆ ನೀಡಿದರು.
ಒಳ ಮೀಸಲಾತಿ ಜಾರಿಗೆ ರಾಜಕೀಯ ಷಡ್ಯಂತ್ರ ಅಡ್ಡಿ: ಫರ್ನಾಂಡಿಸ್
ಬೀದರ್: ಒಳ ಮೀಸಲಾತಿ ಜಾರಿ ವಿಳಂಬವಾಗಲು ರಾಜಕೀಯ ಷಡ್ಯಂತ್ರವೆ ಕಾರಣ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತಗತರಿಸಿದ ಅವರು, ಎ.ಐ.ಸಿ.ಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಹಾಗೂ ಹಾಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಅವರೆ ನಮ್ಮ ಹಾಗೂ ಪರಿಶಿಷ್ಟ ಬಲಗೈ ಬಂಧುಗಳ ಮಧ್ಯ ಬಿರುಕು ಮೂಡಿಸಲು ಪ್ರಯತ್ನಿಸಿರುವರು. ಆದರೆ ನಾವಿಬ್ಬರು ಯಾವತ್ತು ಒಂದೆ ನಾಣ್ಯದ ಮುಖಗಳು. ಹಳ್ಳಗಳಲ್ಲಿ ನಮಗೆ ಹಾಗೂ ಪರಿಸದಿಷ್ಟ ಬಲಗೈ ಜನಗಳಿಗೆ ಉತ್ತಮ ಬಾಂಧವ್ಯ ಇದೆ. ಸಂಬಂಧ ಸರಿಯಾಗಿದೆ. ಹಾಲಿನಂಥ ನಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಕಾರ್ಯ ಈ ನಾಯಕರು ಬಿಡಬೇಕು ಎಂದರು.
ಇಂದು ಒಳಮೀಸಲಾತಿ ವಿರೋಧಿಸುತ್ತಿರುವ ಎಸ್.ಸಿ ರೈಟ್ ಸಂಘಟನೆಗಳು ಎರಡು ವರ್ಷಗಳ ಹಿಂದಿನ ಹೋರಾಟ ನೆನಪು ಮಾಡಲಿ. ಡಿ.ಎಸ್.ಎಸ್ ರಾಜ್ಯ ಸಂಚಾಲಕ ಡಿ.ಜಿ ಸಾಗರ ಹಾಗೂ ಮಾವಳ್ಳಿ ಶಂಕರ ಇಬ್ಬರು ಬೆಂಗಳೂರಿನ ಹೋರಾಟ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟ ಜಾರಿಯಾಗಬೇಕೆಂದು ಒತ್ತಾಯಿಸಿದ್ದರು. ಈಗ ಅವರೆ ವಿರೋಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದರು.
ಕಾಂತರಾಜ ವರದಿ ಜಾರಿ ಮಾಡದೇ ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ಅವರ ವರದಿ ಜಾರಿ ಮಾಡಬೇಕು. ಎರಡು ತಿಂಗಳ ಹಿಂದೆ ನಾಗಮೋಹನದಾಸ ವರದಿ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಅದು ವಿಳಂಬವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷ ಕಮಲಾಕರ ಹೆಗಡೆ, ಜಿಲ್ಲಾ ವಕ್ತಾರ ಶಿವಣ್ಣ ಹಿಪ್ಪಳಗಾಂವ, ಜಿಲ್ಲಾ ಕಾರ್ಯದರ್ಶಿ ದತ್ತಾತ್ರೆಯ ಜ್ಯೋತಿ, ಸಮಾಜ ಮುಖಂಡ ಸುಧಾಕರ ಸೂರ್ಯವಂಶಿ, ಮಹಾ ಪ್ರಧಾನ ಕಾರ್ಯದರ್ಶಿ ರಾಹುಲ ನಂದಿ ಪತ್ರಿಕಾಗೋಷ್ಟಿಯಲ್ಲಿದ್ದರು.
———————-