ಬೀದರ್: ತನು, ಮನ ಹಾಗೂ ಧನದಿಂದ ಶಕ್ತರಾಗಿರುವವರು ಇಲ್ಲಿಯ ಪುಣ್ಯಾಶ್ರಮದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಬಾಳೆ ಹೊನ್ನುರಿನ ರಂಭಾಪುರಿ ಜಗದಗುರುಗಳು ಕರೆ ನೀಡಿದರು.
ಶನಿವಾರ ಮಧ್ಯಾಹ್ನ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಪೂಣ್ಯಾಶ್ರಮದಲ್ಲಿ ಪ್ರಗತಿ ಹಂತದಲ್ಲಿರುವ ಗುರುಭವನ ಕಾಮಗಾರಿ ವಿಕ್ಷಿಸಿ ನಂತರ ನೆರೆದ ಭಕ್ತಾದಿಗಳನ್ನು ಉದ್ದೇಶಿಸಿ ಆಶಿರ್ವಚನ ನೀಡಿದರು.
ಧರ್ಮ ಉಳಿಯಲು ದಾನಿಗಳು ಹೆಚ್ಚಾಗಬೇಕು, ತಮ್ಮ ಶಕ್ತಿಗನುಗುಣವಾಗಿ ಉದಾರ ದಾನ ಮಾಡಿ ಇಲ್ಲಿ ನಡೆಯುತ್ತಿರುವಂತಹ ಸಮುದಾಯ ಭವನ ಹಾಗೂ ಗುರುಭವನ ಸೇರಿದಂತೆ ಇತರೆ ಕಾರ್ಯವನ್ನು ಪೂರ್ಣ ಮಾಡಬೇಕಿದೆ. ಭಕ್ತರಲ್ಲಿ ಗುರುಭಕ್ತಿ ಇನ್ನಷ್ಟು ಹೆಚ್ಚಿಸಲು ಪ್ರತಿ ವರ್ಷ ಪುಣ್ಯಾಶ್ರಮದಲ್ಲಿ ಮೂರು ದಿವಸಗಳ ಕಾಲ ಮಹಾ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಪುಣ್ಯಾಶ್ರಮದ ಸಂಚಾಲಕರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರ ಪರಿಶ್ರಮ ಅಗಣಿತ. ಅವರಿಗೆ ಈಗ ವಯಸ್ಸಾಗಿದೆ. ಆದರೂ ತನ್ನ ಶಕ್ತಿ ಹಾಗೂ ವಯಸ್ಸು ಮೀರಿ ಕಾರ್ಯ ಮಾಡಿದ್ದಾರೆ. ಗುರುವಿನ ವಾಸ್ತವ್ಯಕ್ಕಾಗಿ ಗುರುಭವನ ಕಟ್ಟಡದ ಕಾಮಗಾರಿ ಆರಂಭಿಸಿದ್ದಾರೆ. ಅದು ಲಕ್ಷದಲ್ಲಿ ಮುಗಿಯುವ ಕಾರ್ಯವಿಲ್ಲ. ಕೋಟಿಗಟ್ಟಲೆ ಹಣ ಬೇಕು. ಜಗದ್ಗುರುಗಳ ಸದ್ಭಕ್ತರು ಅವರ ಈ ಗುರುಕೃಪೆ ಕಾರ್ಯಕ್ಕೆ ಕೈ ಜೋಡಿಸಿ ಆದಷ್ಟು ಬೇಗ ಇಲ್ಲಿ ಜಗದ್ಗುರುಗಳ ವಾಸ್ತವ್ಯಕ್ಕೆ ಅನುವು ಮಾಡಿಕೊಡಬೇಕು. ಇದಕ್ಕೆ ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಮುಂದೆ ಬಂದು ವೀರಶೈವ ಪರೆಂಪರೆಯ ಸಂಸ್ಕೃತಿಕ ನೆಲೆಯಾದ ಈ ಪೂಣ್ಯಾಶ್ರಮದ ಸಮಗ್ರ ವಿಕಾಸಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಪ್ರಾಸ್ತಾವಿಕ ಮಾತನಾಡಿ, ಈ ಜಗತ್ತಿಗೆ ವೀರಶೈವ ಪರೆಂಪರೆ ಶರಣ ಪರೆಂಪರೆಗಿAತ ಅತ್ಯಂತ ಹಳೆಯದು ಜೊತೆಗೆ ಭಾರತದ ದಶ ದಿಕ್ಕುಗಳಿಗೂ ವ್ಯಾಪಿಸಿರುವ ಪರೆಂಪರೆ ಇದಾಗಿದೆ. ರೇಣುಕಾದಿ ಪಂಚಾಚಾರ್ಯರ ಹಾಗೂ ಪಂಚ ಜಗದ್ಗುರುಗಳ ಇತಿಹಾಸ ಮೂರು ಸಾವಿರ ವರ್ಷಗಳಿಗೂ ಹಳೆಯದಾದ ಪರೆಂಪರೆ. ಇಂತಹ ಅದ್ವಿತಿಯ ಸಂಸ್ಕೃತಿ ಹೊಂದಿದ ಐದು ಜಗದ್ಗುರುಗಳು ಸದಾ ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹಂಚಿ ಹೋದ ನಮ್ಮ ವೀರಶೈವ ಪರೆಂಪರೆ ಪುನಃ ಸಂಘಟಿತಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿಯ ಉದ್ಯಮಿ ಶಿವಶರಣಪ್ಪ ಸೀರಿ ಮಾತನಾಡಿ, ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರು ಮಾಡಿದ ಕಾರ್ಯ ನಾವ್ಯಾರು ಮಾಡಲಿಕ್ಕೆ ಅಸಾಧ್ಯ. ತಾನು ಜೀವನದಲ್ಲಿ ಗಳಿಸಿದ ಎಲ್ಲ ಸಂಪತ್ತನ್ನು ಗುರುವಿನ ಪಾದಕ್ಕೆ ಅರ್ಪಣೆ ಮಾಡಿ, ಗುರುವಿನ ವಾಸ್ತವ್ಯಕ್ಕಾಗಿ ಸಂಕಲ್ಪ ತೊಟ್ಟು ಗುರುಭವನ ಕಾಮಗಾರಿ ಕೈಗೆತ್ತಿಕೊಂಡಿರುವರು. ಇಲ್ಲಿಯ ಶಕ್ತಿವಂತರು ಹಾಗೂ ಸಂಪತ್ತು ಉಳ್ಳುವವರು ಉದಾರವಾಗಿ ಮುಂದೆ ಬಂದು ಆದಷ್ಟು ಬೇಗ ರಂಭಾಪುರಿ ಜಗದ್ಗುರುಗಳು ಇಲ್ಲಿ ಉಳಿದುಕೊಳ್ಳಲು ಗುರುಭವನ ಕಟ್ಟಡ ಕಾಮಗಾರಿ ಮುಗಿಯಲಿ ಎಂದರು.
ನೇತೃತ್ವ ವಹಿಸಿದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಮಾತನಾಡಿ, ಭಾಲ್ಕಿಯ ಲಿ.ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ತಮಲೂರಿನ ಲಿ.ಬಸವಲಿಂಗ ಶ್ರೀಗಳ ಮೂಲಕವೇ ನನಗೆ ರಂಭಾಪುರಿ ಜಗದ್ಗುರುಗಳ ಆಶಿರ್ವಾದವಾಗಿದೆ. ಜಗದ್ಗುರುಗಳ ಕಾರುಣ್ಯದಿಂದಲೇ ಇಷ್ಟು ಕಾರ್ಯ ಮಾಡಲು ನನಗೆ ಸಾಧ್ಯವಾಗಿದೆ. ಮುಂದೆಯೂ ಜಗದ್ಗುರುಗಳ ಆಶಿರ್ವಾದವೊಂದಿದ್ದರೆ ಸಾಕು ಎಂದು ಹೇಳಿ ಭಾವುಕರಾದರು.
ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಶ್ರೀಕಾಂತ ಸ್ವಾಮಿ ಸೋಲಪುರ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ ಬಿರಾದಾರ ವಂದಿಸಿದರು. ಪುಣ್ಯಾಶ್ರಮದ ಸದ್ಭಕ್ತರಾದ ಮಲ್ಲಿಕಾರ್ಜುನ ಚಿಕ್ಕಪೇಟ, ಕಾರ್ತಿಕ ಸ್ವಾಮಿ ಜ್ಯಾಂತಿ, ಕಾರ್ತಿಕ ಮಠಪತಿ, ಗುಂಡಯ್ಯ ಸ್ವಾಮಿ, ಪ್ರೊ.ವಿದ್ಯಾವತಿ ಹಿರೇಮಠ, ಶಿವರಾಜ, ನಾಗಯ್ಯ ಸ್ವಾಮಿ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.
ಇದಕ್ಕೂ ಮುನ್ನ ಜಗದ್ಗುರುಗಳು ಪ್ರಗತಿ ಹಂತದಲ್ಲಿರುವ ಗುರುಭವನ ಕಾಮಗಾರಿ ವಿಕ್ಷಿಸಿ, ಮುಂದಿನ ಕಾಮಗಾರಿ ಬಗ್ಗೆ ಒಂದಿಷ್ಟು ಸಲಹೆ ಹಾಗೂ ಸೂಚನೆ ನೀಡಿದರು. ನಂತರ ಬಂದ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.
—————-