ಬೀದರ್, ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಳವಾಡೆ ಹೇಳಿದರು.
ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬ್ರಿಮ್ಸ್) ಸಭಾಂಗಣದಲ್ಲಿ ಎಚ್‌ಪಿವಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗರ್ಭಕಂಠದ ಕ್ಯಾನ್ಸರ್ ತಡೆ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಂದ ಪ್ರತಿವರ್ಷ 75-80 ಸಾವಿರ ಮಹಿಳೆಯರು ಮೃತಪಡುತ್ತಿದ್ದಾರೆ. ಪ್ರತಿ ಎಂಟು ನಿಮಿಷಕ್ಕೆ ಒಂದು ಮಹಿಳೆಯ ಮೃತ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು 2030ರ ವೇಳೆಗೆ ಸಂಪೂರ್ಣವಾಗಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಜಾಗೃತಿ ಹೊಂದುವ ಅವಶ್ಯಕತೆ ಇದೆ ಎಂದರು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರಕಾರ ಎಚ್‌ಪಿವಿ ಲಸಿಕೆ ಪರಿಚಯಿಸಿದೆ. 9 ರಿಂದ 14ವಷÀðದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಕಡ್ಡಾಯವಾಗಿ 6 ತಿಂಗಳಿನ ಅಂತರದಲ್ಲಿ ಎರಡು ಬಾರಿ ಎಚ್‌ಪಿವಿ ಲಸಿಕೆ ಹಾಕಿಸಬೇಕು. 15-26 ವರ್ಷದೊಳಗಿನ ಯುವಕರಿಗೆ ಮೂರು ಬಾರಿ ಲಸಿಕೆ ಕೊಡಿಸಬೇಕು ಮತ್ತು 15-45 ವಷÀðದೊಳಗಿನ ಮಹಿಳೆಯರಿಗೆ ಎರಡು ತಿಂಗಳಿನ ಅಂತರದಲ್ಲಿ ಮೂರು ಬಾರಿ ಲಸಿಕೆ ಹಾಕಿಸಬೇಕು ಎಂದು ಮಾಹಿತಿ ನೀಡಿದರು.
ಜತೆಗೆ 30ವಷÀð ದಾಟಿದ ಮಹಿಳೆಯರು ಕಡ್ಡಾಯವಾಗಿ ಎಚ್‌ಪಿವಿ ಸ್ಕ್ರೀನಿಂಗ್ ಮಾಡಿಸಬೇಕು ಎಂದು ಸಲಹೆ ನೀಡಿದರು.
ವಿಶ್ವ ಆರೋಗ್ಯ ಸಂಸ್ಥೆ 90-70-90 ತಂತ್ರಗಳನ್ನು ಸ್ಪಷ್ಟವಾದ ಗುರಿಯೊಂದಿಗೆ ಪರಿಚಯಿಸಿದೆ. ಶೇ.90ರಷ್ಟು ಎಚ್‌ಪಿವಿ ಲಸಿಕೆ ನೀಡುವುದು. ಶೇ.70 ರಷ್ಟು ಗರ್ಭಕಂಠದ ತಪಾಸಣೆ ಮತ್ತು ಶೇ.90 ರಷ್ಟು ಕ್ಯಾನ್ಸರ್ ಚಿಕಿತ್ಸೆ ಪಡೆದು ಕೊಂಡರೆ ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣ ನಿರ್ಮೂಲನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್, ಮೆಡಿಕಲ್ ಸರ್ಜನ್ ಎಸ್.ಎಸ್.ಬಾಲಿ, ಡಾ.ತಾಪಸೆ, ಡಾ.ರಾಜೇಶ ಪಾರಾ, ಡಾ.ಅಹಿಮೋದ್ದಿನ್, ಡಾ.ಶೈಲೇಂದ್ರ, ಡಾ.ಉಮಾ ದೇಶಮುಖ ಸೇರಿದಂತೆ ಹಲವರು ಇದ್ದರು.
ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ. ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗೆ ಎಚ್‌ಪಿವಿ ಲಸಿಕೆ ಸಹಕಾರಿಯಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಲಸಿಕೆ ನೀಡಲಾಗುತ್ತಿದೆ.
– ಡಾ.ಶೈಲಜಾ ತಳವಾಡೆ ಸ್ತ್ರೀರೋಗ ತಜ್ಞೆ ತಳವಾಡೆ ಆಸ್ಪತ್ರೆ ಭಾಲ್ಕಿ