ಬೀದರ್ : ಔರಾದ (ಬಿ) ತಾಲ್ಲೂಕಿನ ವನಮಾರಪಳ್ಳಿಯಲ್ಲಿ 21 ಕೋಟಿ ಅನುದಾನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಔರಾದ(ಬಿ) ಪಟ್ಟಣದ ಖಾಸಗಿ ಕಟ್ಟಡವೊಂದರಲ್ಲಿ ಈ ವಸತಿ ಶಾಲೆ ನಡೆಸಲಾಗುತ್ತಿದ್ದು, 240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಕಟ್ಟಡ ತುಂಬ ಚಿಕ್ಕದಾಗಿದ್ದು, ಮಕ್ಕಳ ವಸತಿ ಮತ್ತು ಬೋಧನೆಗೆ ತೀವ್ರ ಸಮಸ್ಯೆಯಾಗುತ್ತಿರುವುದ್ನು ನಾನು ಖುದ್ದಾಗಿ ಭೇಟಿ ನೀಡಿ ಗಮನಿಸಿದ್ದೇನೆ. ನಂತರ ಸರ್ಕಾರಕ್ಕೆ ಸಾಕಷ್ಟು ಬಾರಿ ಪತ್ರ ಬರೆದು ಹೊಸ ವಸತಿ ಶಾಲೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದ್ದೇನೆ. ಅಲ್ಲದೇ ಸಂಬAಧಪಟ್ಟ ಸಚಿವರನ್ನು ಭೇಟಿಯಾಗಿ ಹೊಸ ಕಟ್ಟಡ ನಿರ್ಮಿಸುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ನನ್ನ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಮಕ್ಕಳು ಇಷ್ಟು ದಿನ ಎದುರಿಸುತ್ತಿದ್ದ ಸಮಸ್ಯೆ ದೂರವಾಗುವ ದಿನಗಳು ಹತ್ತಿರವಾಗಿವೆ ಎಂದಿದ್ದಾರೆ.
ಬಲ್ಲೂರ(ಜೆ), ಚಿಂತಾಕಿ, ಹೊರಂಡಿಯಲ್ಲಿ ಈಗಾಗಲೇ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಅದರಂತೆ ವನಮಾರಪಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕೂಡ ಸುಮಾರು 9 ಎಕರೆ ಜಾಗದಲ್ಲಿ ಭವ್ಯವಾದ ವಸತಿ ಶಾಲೆ ತಲೆ ಎತ್ತಲಿದೆ. ಎರಡು ಮಹಡಿಗಳ ಶಾಲಾ ಕಟ್ಟಡ, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳು, ಅಡುಗೆ ಮತ್ತು ಭೋಜನಾಲಯ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮAದಿರ, ಕಾಂಪೌAಡ್ ಗೋಡೆ, ರಸ್ತೆ, ಚರಂಡಿ, ಕೊಳವೆಬಾವಿ, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ, ಸೋಲಾರ್ ವಾಟರ್ ಹೀಟರ್, ಸೋಲಾರ್ ಬೀದಿ ದೀಪ, ಅಗ್ನಿಶಾಮಕ, ವಿದ್ಯುತ್ ಕಾಮಗಾರಿ, ರಕ್ಷಣಾ ಕೊಠಡಿ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳು ನೂತನ ವಸತಿ ಶಾಲೆಯಲ್ಲಿ ಇರಲಿವೆ. ಟೆಂಡರ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಬೇಗ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಶಿಕ್ಷಣ ಅಭಿವೃದ್ಧಿಯಾದರೆ ಎಲ್ಲ ಕ್ಷೇತ್ರಗಳ ಪ್ರಗತಿಯಾಗಲು ಸಾಧ್ಯ ಎಂದು ನಂಬಿರುವ ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇನೆ. ಅದರಂತೆ ಅವಶ್ಯಕತೆಗೆ ತಕ್ಕಂತೆ ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದ್ದೇನೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಾಲೆ, ಕಾಲೇಜು, ವಸತಿ ಶಾಲೆಗಳನ್ನು ನಿರ್ಮಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಸರಿಯಾಗಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತರಬೇಕೆಂದು ಶಾಸಕರು ತಿಳಿಸಿದ್ದಾರೆ.