Saturday, May 24, 2025
Homeಬೀದರ್ಔರಾದ(ಬಿ) ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ಸಂಚಾರ

ಔರಾದ(ಬಿ) ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ಸಂಚಾರ

ಬೀದರ್ :  ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಾರ್ಚ್ 21ರಂದು ಔರಾದ(ಬಿ) ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಸಂಚರಿಸಿ, ಸ್ವಚ್ಛತೆ, ಚರಂಡಿ, ರಸ್ತೆ, ಕುಡಿಯುವ ನೀರಿನ ಪೂರೈಕೆಯನ್ನು ಪರಿಶೀಲಿಸಿದರು. ಈ ವೇಳೆ ಕೆಲವು ವಾರ್ಡ್ಗಳಲ್ಲಿ ಅಶುಚಿತ್ವವನ್ನು ಕಂಡು ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ 20 ವಾರ್ಡ್ಗಳಲ್ಲಿ ಸ್ವಚ್ಛತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಗಮನಿಸಿದರು. 6ನೇ ವಾರ್ಡ್ ಹಾಗೂ ಮತ್ತಿತರೆ ಕಡೆಗಳಲ್ಲಿ ಚರಂಡಿಗಳನ್ನು ತುಂಬಿ ದುರ್ನಾತ ಬೀರುವುದನ್ನು ಕಂಡು ಸಿಡಿಮಿಡಿಗೊಂಡರು. ಸ್ವಚ್ಛತೆಯ ಕುರಿತು ಪದೇ ಪದೇ ಹೇಳುತ್ತಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಅಶುಚಿತ್ವದ ಕಾರಣ ಡೇಂಗಿ, ಮಲೇರಿಯಾ, ಚಿಕೂನ್‌ಗುನ್ಯಾದಂತಹ ಹಲವಾರು ಕಾಯಿಲೆಗಳು ಹರಡುತ್ತವೆ. ಇನ್ನಾದರೂ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ರತಿ ವಾರ್ಡ್ಗೆ ಇಬ್ಬರು ಸ್ವಚ್ಛತಾ ಕರ್ಮಿಗಳನ್ನು ನೇಮಿಸಿಕೊಂಡು ಪ್ರತಿದಿನ ಎಲ್ಲಾ ಕಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಸ್ವಚ್ಛತೆಯ ನಿರ್ವಹಣೆಗೆ ಇರುವ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವು ಪ್ರತಿ ವಾರ್ಡ್ಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಬೇಕು. ಬೀದಿ ದೀಪಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ವಾರ್ಡ್ 6ರಲ್ಲಿ ಮಹಿಳೆಯೊಬ್ಬರು ಮಂಜೂರಾದ ಮನೆಗೆ ಹಣ ಬಿಡುಗಡೆ ಮಾಡುತ್ತಿಲ್ಲವೆಂದು ದೂರು ನೀಡಿದಾಗ ಶಾಸಕರು ಅಧಿಕಾರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡು 5 ದಿನದೊಳಗೆ ಕೆಲಸ ಮಾಡಿಕೊಡುವಂತೆ ಸೂಚಿಸಿದರು.
ಭವಾನಿ ನಗರ ತಾಂಡಾ, ಬಸವನಗಲ್ಲಿ ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಸಂಖ್ಯೆ, ಹಾಜರಾತಿ, ಶಿಕ್ಷಕರು, ಮಧ್ಯಾಹ್ನದ ಬಿಸಿಯೂಟವನ್ನು ವೀಕ್ಷಿಸಿರು. ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಶಿಕ್ಷಕರು ಸರಿಯಾಗಿ ಬೋಧನೆ ಮಾಡಬೇಕು. ಮಕ್ಕಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗಳತ್ತ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.

ಕೆಲವು ವಾರ್ಡ್ಗಳಲ್ಲಿ ಮಹಿಳೆಯರು ನೀರಿನ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಬೇಸಿಗೆ ಆರಂಂಭವಾಗಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಎಲ್ಲ ವಾರ್ಡ್ಗಳಿಗೆ ಪ್ರತಿದಿನ ಸಮರ್ಪಕವಾಗಿ ನೀರು ಪೂರೈಸಬೇಕು. ಎಲ್ಲಿಯೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಔರಾದ(ಬಿ) ಪಟ್ಟಣದಲ್ಲಿ ಪ್ರತಿ ವರ್ಷ ಎದುರಾಗುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆಯನ್ನು 84 ಕೋಟಿ ವೆಚ್ಚದ ಯೋಜನೆ ಜಾರಿಗೊಳಿಸಿದ್ದು, ಇದು ಪೂರ್ಣಗೊಂಡರೆ ನೀರಿನ ಸಮಸ್ಯೆಯೇ ಇರುವುದಿಲ್ಲವೆಂದು ತಿಳಿಸಿದರು.
ಪಶು ಆಸ್ಪತ್ರೆಯ ಅವ್ಯವಸ್ಥೆಗೆ ಗರಂ: ಪಟ್ಟಣದಲ್ಲಿರುವ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಚುರುಕು ಮುಟ್ಟಿಸಿದರು. ಅಸ್ಪತ್ರೆಯಲ್ಲಿ ಕೆಲವು ಸಿಬ್ಬಂದಿ ಮಾತ್ರ ಹಾಜರಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಮೊದಲು ಕುಳಿತುಕೊಳ್ಳಲು ಒಳ್ಳೆಯ ಕುರ್ಚಿ ಸಹ ಇರಲಿಲ್ಲ. ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ 4 ಕೋಟಿ ಅನುದಾನ ತಂದು ಹೈಟೆಕ್ ಪಶು ಆಸ್ಪತ್ರೆ ನಿರ್ಮಿಸಿದ್ದೇನೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲವೆಂದರೆ ಏನರ್ಥ? ಎಂದು ಪ್ರಶ್ನಿಸಿದರು.

ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಔರಾದ(ಬಿ) ತಾಲ್ಲೂಕು ಪಶು ಆಸ್ಪತ್ರೆಯಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರೂ ಕೂಡ ಕೆಲವೇ ಸಿಬ್ಬಂದಿ ಹಾಜರಿದ್ದಾರೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಹೇಳಿದರು. ಪಶು ಆಸ್ಪತ್ರೆಯ ಆವರಣದಲ್ಲಿ ಕಸ ಆವರಿಸುವುದನ್ನು ಕಂಡು ಕೆಂಡಾಮAಡಲರಾದರು. ಮುಂದಿನ ದಿನಗಳಲ್ಲಿ ಭೇಟಿ ನೀಡಿದಾಗ ಪಶು ಆಸ್ಪತ್ರೆಯ ಆವರಣ ಸ್ವಚ್ಛವಾಗಿರದೇ ಇದ್ದಲ್ಲಿ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು. ಆಸ್ಪತ್ರೆ ಆವರಣದಲ್ಲಿ ಉದ್ಯಾನ ನಿರ್ಮಿಸಿಕೊಳ್ಳಿ ಬೇಕಾದಷ್ಟು ಅನುದಾನ ಒದಗಿಸುತ್ತೇನೆಂದು ಹೇಳಿದರು.
ಪೊಲೀಸ್ ಠಾಣೆಗೆ ಭೇಟಿ: ಪಟ್ಟಣದ ಪೊಲೀಸ್ ಠಾಣೆಗೆ ಬೇಟಿ ನೀಡಿ ಇಲಾಖೆಯ ಕೆಲಸ ಕಾರ್ಯಗಳನ್ನು ವೀಕ್ಷಿಸಿದರು. ಪೊಲೀಸ್ ಸಿಬ್ಬಂದಿಯ ಹಾಜರಾತಿಯನ್ನು ಗಮನಿಸಿ ಎಷ್ಟು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಎಷ್ಟು ಜನ ಗೈರು ಹಾಜರಾಗಿದ್ದಾರೆಂದು ತಿಳಿದುಕೊಂಡರು. ಈ ವೇಳೆ ಪೊಲೀಸ್ ಅಧಿಕಾರಿಗಳು ಔರಾದ(ಬಿ) ಪಟ್ಟಣದಲ್ಲಿ ಸುರಕ್ಷತೆಗಾಗಿ ಕೈಗೊಂಡ ಕೆಲಸ ಕಾರ್ಯಗಳನ್ನು ಶಾಸಕರ ಗಮನಕ್ಕೆ ತಂದರು. ಶಾಸಕರಿಗೆ ಟಿವಿ ಪರದೆಗಳಲ್ಲಿ ಪಟ್ಟಣದಾದ್ಯಂತ ಅಳವಡಿಸಿರುವ ಸಿಸಿ ಟಿವಿಗಳ ಧೃಶ್ಯಗಳನ್ನು ತೋರಿಸಲಾಯಿತು. ಈ ವೇಳೆ ಶಾಸಕರು ಪೊಲೀಸ್ ಇಲಾಖೆಗೆ ಏನೇನು ಅವಶ್ಯಕತೆಯಿದೆ ಎನ್ನುವ ಬಗ್ಗೆ ಪಟ್ಟಿ ನೀಡಿ ಹಂತ ಹಂತವಾಗಿ ಈಡೇರಿಸಲಾಗುವುದೆಂದು ಹೇಳಿದರು. ಪೊಲೀಸ್ ಠಾಣೆಗೆ ಎರಡು ಎಕರೆಗೂ ಹೆಚ್ಚಿನ ಜಮೀನಿದೆ. ಠಾಣೆಯ ಆವರಣದಲ್ಲಿ ಉದ್ಯಾನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ರೋಗಿಗಳೊಂದಿಗೆ ಮಾತನಾಡಿಸಿ, ಏನು ಸಮಸ್ಯೆಯಿದೆ ?, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರಾ ಎಂದು ಪ್ರಶ್ನಿಸುವ ಮೂಲಕ ವೈದ್ಯರ ಕಾರ್ಯವೈಖರಿಯನ್ನು ಗಮನಿಸಿದರು. ಎಲ್ಲ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಸರ್ಕಾರಿ ಆಸ್ಪತ್ರೆಗೆ ಬಡ ರೋಗಿಗಳು ಬರುತ್ತಾರೆ. ಅವರನ್ನು ನಿರ್ಲಕ್ಷಿಸದೇ ಸಮರ್ಪಕ ಚಿಕಿತ್ಸೆ ನೀಡಬೇಕೆಂದು ಹೇಳಿದರು.

1.23 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿಸಿ ರಸ್ತೆ, ಬೋರ್‌ವೆಲ್, ಎಲ್‌ಇಡಿ ವಿದುತ್ ದೀಪಗಳು, ಹೈಮಾಸ್ಟ್ ದೀಪಗಳು, ವಿದ್ಯುತ್ ಕಂಬಗಳ ಅಳವಡಿಕೆ, ಬೀದಿ ದೀಪಗಳು, ಚರಂಡಿ ಏರಿದಂತೆ ಸುಮಾರು 1.23 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಮುಖಂಡರಾದ ರಾಮಶಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ್, ಖಂಡೋಬಾ ಕಂಗಟೆ, ಕೇರಬಾ ಪವಾರ್, ದಯಾನಂದ ಘೂಳೆ, ಶೇಷರಾವ ಕೋಳಿ, ರಾಮ ನರೋಟೆ, ಅಶೋಕ ಅಲ್ಮಾಜೆ, ಯಾದವರಾವ, ಬಾಬುರಾವ ಅಲ್ಮಾಜೆ, ಸಂಜು ವಡೆಯರ್, ಬನ್ಸಿನಾಯಕ್, ಗುಂಡಪ್ಪ ಮುಧಾಳೆ, ಬಾಬು ರಾಠೋಡ್, ಯಾದು ಮೇತ್ರೆ, ಶ್ರೀನಿವಾಸ ಖೂಬಾ, ವೀರೇಶ ಅಲ್ಮಾಜೆ, ಎಂ.ಡಿ ಸಲಾವುದ್ದಿನ್, ಸಂದೀಪ ಪಾಟೀಲ, ಸುಜಿತ ಪವಾರ್, ಬಾಲಾಜಿ ವಾಗ್ಮಾರೆ ಸೇರಿದಂತೆ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3