ಆ. 30ರಿಂದ ಖ್ವಾಜಾ ಅಬುಲ್‌ಫೈಜ್ ದರ್ಗಾ ಉರ್ಸ್ ಮೂರು ದಿನಗಳ ವರೆಗೆ 568ನೇ ಉರ್ಸ್ ಸಮಾರಂಭ
ಬೀದರ್ : ಬೀದರ್‌ನ ಐತಿಹಾಸಿಕ ಹಜರತ್ ಖ್ವಾಜಾ ಅಬುಲ್ ಫೈಜ್ ದರ್ಗಾದ 568ನೇ ಉರ್ಸ್ ಸಮಾರಂಭವು ಆ. 30ರಿಂದ ಮೂರು ದಿನಗಳ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ದರ್ಗಾದ ಸಜ್ಜಾದೆ ಸೈಯದ್ ಅಸದುಲ್ಲಾ ಹುಸೇನಿ (ಸಾಖೇಬ್ ಹುಸೇನಿ) ತಿಳಿಸಿದ್ದಾರೆ.
ಆ. 30ರಂದು ಸಂಜೆ 4 ಕ್ಕೆ ಬೀದರ್‌ನ ಹಳೆ ಭಾಗದ ನೂರ್‌ಖಾನ್ ತಾಲೀಮ್‌ನಲ್ಲಿರುವ ಖಾನಖ್ವಾಹ್‌ದಲ್ಲಿ ಖವ್ವಾಲಿ, ಸಂಜೆ 5.30ಕ್ಕೆ ಖಾನಖ್ವಾಹ್‌ದಿಂದ ದರ್ಗಾ ವರೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ಸಂದಲ್ (ಗಂಧ) ಲೇಪನ್‌ದ ನಂತರ ಸಾಮೂಹಿಕ ಪ್ರಾರ್ಥನೆ ಜರುಗಲಿದೆ.
ಅಂದು ರಾತ್ರಿ 9.30 ಗಂಟೆಗೆ ದರ್ಗಾದಲ್ಲಿ ನಡೆಯುವ ಸಮಾರಂಭದಲ್ಲಿ 7ನೇ ಖ್ವಾಜಾ ಅಬುಲ್ ಫೈಜ್ ಅವಾರ್ಡನ್ನು ಸಜ್ಜಾದಾ ನಶೀನ್ ಮುತ್ತವಲಿ ದರ್ಗಾ ಖಾಜಾ ಬಂದೆನವಾಜ್ ಗುಲಬರ್ಗಾ, ರಾಜ್ಯ ವಕ್ಫ ಬೋರ್ಡ ಅಧ್ಯಕ್ಷರು, ಕೆಬಿಎನ್ ವಿಶ್ವ ವಿದ್ಯಾಲಯದ ಉಪ ಕುಲಪತಿಗಳು ಹಾಗೂ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಸದಸ್ಯರಾದ ಹಜರತ್ ಸೈಯದ್ ಮೋಹಮ್ಮದ ಅಲಿ ಅಲ್-ಹುಸೇನಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ರಾತ್ರಿ 11 ಗಂಟೆಗೆ ಖವ್ವಾಲಿ ಜರುಗಲಿದೆ.
ಆ. 31ರಂದು ರಾತ್ರಿ 10 ಗಂಟೆಗೆ ದರ್ಗಾದಲ್ಲಿ ಖವ್ವಾಲಿ ಜರುಗಲಿದೆ. ಸೆಪ್ಟಂಬರ್ 1 ರಂದು ಬೆಳಿಗ್ಗೆ 6ಕ್ಕೆ ಖತ್ಮೆ ಕುರಾನ್, ಸಂಜೆ 4 ಗಂಟೆಗೆ ದರ್ಗಾದಿಂದ ಖಾನ್‌ಖ್ವಾಹ ವರೆಗೆ ಮೆರವಣಿಗೆ ನಡೆಸಿ ಸಮಾರೋಪಗೊಳ್ಳಲಿದೆ. ಇಲ್ಲಿ ಯಾವುದೇ ಜಾತಿ, ವರ್ಗಕ್ಕೆ ನಿರ್ಭಂಧವಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ.
ಮೂರು ದಿನಗಳ ವರೆಗೆ ನಡೆಯಲಿರುವ ಉರ್ಸ ಸಮಾರಂಭದಲ್ಲಿ ರಾಜ್ಯ ಅಲ್ಲದೇ ಪಕ್ಕದ ತೆಲಂಗಾಣಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ದರ್ಗಾದ ಹಿರಿಯರಾದ ಮತೀನೋದ್ದಿನ್ ಹುಸೇನಿ ತಿಳಿಸಿದ್ದಾರೆ.
—
