ವಚನಗಳು ಹಿಂದು ಇಂದು ಎಂದೆಂದೂ ಪ್ರಸ್ತುತ : ಭಗವಂತ ಖೂಬಾ
ಬೀದರ್: ಬಸವಾದಿ ಶರಣರ ವಚನಗಳು ಹಿಂದು ಇಂದು ಎಂದೆAದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಜಗತ್ತನ್ನು ಬೆಳಗಲು ವಚನಗಳು ದಾರಿದೀಪವಾಗಿದೆ. ಹೀಗಾಗಿಯೇ ದೇಶ ವಿದೇಶಗಳಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನುಭವ ಮಂಟಪದ ಪರಿಕಲ್ಪನೆ ಹಾಗೂ ಬಸವಾದಿ ಶರಣರ ವಚನಗಳ ಕುರಿತು ಮಾತನಾಡುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ನಗರದ ಮೈಲೂರನಲ್ಲಿರುವ ಗಾಂಧಿನಗರ ಕಾಲೋನಿಯ ಬಸವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳುಗಳ ಕಾಲ ಹಮ್ಮಿಕೊಂಡ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿಯವರ ವಿಶ್ವಧರ್ಮ ಪ್ರವಚನದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಸವ ತತ್ವದಿಂದಲೇ ದೇಶದಲ್ಲಿ ಮತ್ತು ವಿಶ್ವದಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯ. ವಚನ ಸಾಹಿತ್ಯದಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರವಿದೆ. ಇಂತಹ ಶ್ರೀಮಂತ ಸಾಹಿತ್ಯ ನಮ್ಮ ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯಲ್ಲಿಯೇ ರಚನೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ಪ್ರಜಾಪ್ರಭುತ್ವ ಜನಿಸಿದ್ದು ಯುಕೆ ಅಂದರೆ ಇಂಗ್ಲೆಂಡ್‌ನಲ್ಲಲ್ಲ. ಬದಲಾಗಿ ಯುಕೆ ಎಂದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ. ಈ ಕಾರಣಕ್ಕಾಗಿಯೇ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ಸಾಕಷ್ಟು ಅನುದಾನ ಒದಗಿಸಿದ್ದರು. ಬಸವ ತತ್ವವನ್ನು ಹಗಲಿರುಳೆನ್ನದೆ ನಿರಂತರ ಪ್ರಚಾರಗೈಯುತ್ತಿರುವ ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರಿಗೆ ಅಭಿನಂದನೆಗಳು ಎಂದು ಖೂಬಾ ಶುಭ ಹಾರೈಸಿದರು.
ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ ಸುಮಾರು ಒಂದು ತಿಂಗಳು ಪೂಜ್ಯರ ಪ್ರವಚನ ಆಲಿಸಿದ ತಾವುಗಳೆಲ್ಲರೂ ಬಸವ ತತ್ವದ ಮಾರ್ಗದಲ್ಲಿ ನಡೆದೆ ಜನ್ಮ ಸಾರ್ಥಕವಾಗುತ್ತದೆ. ಉತ್ತಮ ಮಾತು, ಸಂಸ್ಕಾರ ಮತ್ತು ನಡವಳಿಗೆ ಬದುಕು ಹಸನುಗೊಳಿಸುತ್ತದೆ. ವಯಸ್ಸಾದ ತಂದೆ-ತಾಯಿಗಳಿಗೆ ಮಕ್ಕಳು ಪಾಲನೆ ಮಾಡಬೇಕಾದರೆ ಬಸವ ತತ್ವದ ಅಗತ್ಯತೆಯಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಬೀದರ ವಿ.ವಿ.ಯ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಮಾತನಾಡಿ ಸಮಾರೋಪ ಸಮಾರಂಭದಲ್ಲಿ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಮದುವೆಯಲ್ಲಿ ದುಂದುವೆಚ್ಚ ಮಾಡಬಾರದು. ಮಕ್ಕಳು ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸದೆ ಪಾಲನೆ ಪೋಷಣೆ ಮಾಡಬೇಕು. ಲಿಂಗಾಯತರು ಬಸವ ತತ್ವದ ಮಾರ್ಗದಲ್ಲಿ ನಡೆಯಬೇಕು. ಗಾಂಧಿನಗರ ಬಸವ ಮಂಟಪದಲ್ಲಿ ಪ್ರತಿನಿತ್ಯ ಪೂಜೆ ನಡೆಯಬೇಕು ಮತ್ತು ಕಾಲೋನಿಯ ಜನರು ದುರ್ಗುಣ ಮತ್ತು ದುಶ್ಚಟಗಳಿಂದ ದೂರ ಇರಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಎಂದು ಕಮಠಾಣೆ ತಿಳಿಸಿದರು.

ವೇದಿಕೆ ಮೇಲೆ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ವಹಿಸಿದ್ದರು. ಸಮ್ಮುಖವನ್ನು ಮಾತೆ ಸತ್ಯಾದೇವಿ ವಹಿಸಿದ್ದರು. ಬೀದರ ವಿ.ವಿ. ಕುಲಸಚಿವ ಪ್ರೊ. ಪರಮೇಶ್ವರ ನಾಯಕ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಸ್.ದಿವಾಕರ್, ಅಜೀಜಖಾನ್, ಲಕ್ಷಿಬಾಯಿ ರಾಜೊಳೆ, ಅಶೋಕ ಮಾನೂರೆ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ವಿಶ್ವನಾಥ ಹಳೆಂಬುರ, ಸೂರ್ಯಕಾಂತ ನೀಲಮನಳ್ಳಿ, ಕಮಲಾಕರ ಪಾಟೀಲ, ವೈಜಿನಾಥ ರತ್ನಾಪುರ, ಪಪ್ಪು ಮಡಿವಾಳ, ಮದನಕುಮಾರ, ಶರಣು ಗಾದಗಿ, ಮಲ್ಲಿಕಾರ್ಜುನ ಕಾರಾಮುಂಗಿ, ನಂದು ಬಾವಗಿ, ಡಾ.ಸುರೇಶ ಪಾಟೀಲ ಸೇರಿದಂತೆ ಹಲವರಿದ್ದರು.
ಮೆರವಣಿಗೆ: ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಾಂಧಿನಗರ ಹನುಮಾನ ಮಂದಿರದಿಂದ ಬಸವೇಶ್ವರ ಮಂಟಪವರೆಗೆ ಪಥಸಂಚಲನ ಜರುಗಿತು. ಈ ಮೆರವಣಿಗೆಗೆ ಷಟಸ್ಥಲ ಧ್ವಜ ತೋರಿಸಿ ಬೀದರ ವಿವಿ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ಚಾಲನೆ ನೀಡಿದರು. ವಚನಗಳ ಮೇಲೆ ಮಕ್ಕಳು, ಯುವಕರು, ಮಹಿಳೆಯರು ನೃತ್ಯ ಮಾಡಿ ನಲಿದರು. ಎಲ್ಲೆಲ್ಲೂ ಷಟಸ್ಥಲ ಧ್ವಜ ರಾರಾಜಿಸಿದವು. ಕೊನೆಯಲ್ಲಿ ಮಹಾಪ್ರಸಾದ ಸವಿದು ಪುನೀತರಾದರು.
