Friday, January 16, 2026
HomePopularಔರಾದನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹ

ಔರಾದನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹ

ಔರಾದನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹ

ಔರಾದ್ :  ಪುಣ್ಯಭೂಮಿ ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಕಳಂಕ ತರಲು ನಡೆಯುತ್ತಿರುವ ಷಡ್ಯಂತ್ರವನ್ನು ವಿರೋಧಿಸಿ ಬಿಜೆಪಿ ಮಂಡಲ ಘಟಕದ ವತಿಯಿಂದ ಔರಾದ(ಬಿ) ಪಟ್ಟಣದಲ್ಲಿ ಆ.25ರಂದು ಬೃಹತ್ ಪ್ರತಿಭಟನೆ ನೆಡೆಸಲಾಯಿತು.
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಪಟ್ಟಣದ ಎಪಿಎಂಸಿ ವೃತ್ತದ ಬಳಿ ಪ್ರತಿಭಟನೆಗೆ ಚಾಲನೆ ನೀಡಿದರು. ಪ್ರಮುಖ ಮಾರ್ಗಗಳ ಮೂಲಕ ಪ್ರತಿಭಟನಾ ಬಸವೇಶ್ವರ ವೃತ್ತಕ್ಕೆ ಬಂದು ಕೊನೆಗೊಂಡಿತು. ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಮಾನವ ಸರಪಳಿಯನ್ನು ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ರೂಪಿಸಿದ ಸಮಾಜ ವಿರೋಧಿ, ದೇಶ ವಿರೋಧಿಗಳ ಜಾಲದ ಪತ್ತೆಗಾಗಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ‘ಧರ್ಮಕ್ಕೆ ಜಯವಾಗಲಿ, ದುಷ್ಟರ ಸಂಹಾರವಾಗಲಿ’, ‘ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರ ಬಂಧನ ಯಾವಾಗ ?’, ‘ಹಿಂದುಗಳ ಕೆಣಕಿದರೆ ಸಮರ ಎಡಪಂಥೀಯರೆ ಎಚ್ಚರ’ ಎನ್ನುವ ಫಲಕಗಳನ್ನು ಹಿಡಿದು ಜಯಘೋಷಗಳನ್ನು ಮೊಳಗಿಸಲಾಯಿತು.


ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ಕರ್ನಾಟಕ ಮಾತ್ರವಲ್ಲ, ಇಡೀ ವಿಶ್ವದ ಸಮಸ್ತ ಹಿಂದುಗಳ ಶೃದ್ಧೆ, ಭಕ್ತಿ, ನಂಬಿಕೆಯುಳ್ಳ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಹಿಂದು ಧರ್ಮದ ಪುನರುತ್ಥಾನಕ್ಕಾಗಿ, ಮಾನವ ಉದ್ಧಾರಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಜನಸೇವೆಯೇ ಜನಾರ್ಧನ ಸೇವೆ ಎಂದು ಜನಪರ, ಜೀವಪರವಾದ ಕೆಲಸಕಾರ್ಯಗಳು ಮಾಡುತ್ತಿದ್ದಾರೆ.
ಸಮಾಜ, ದೇಶ ವಿರೋಧಿಗಳು ಬಹು ದೊಡ್ಡ ಷಡ್ಯಂತ್ರ ಹೆಣೆದು ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ದೇಶ-ವಿದೇಶದ ಕೆಲ ಕಾಣದ ಕೈಗಳುಇದರ ಹಿಂದೆ ಕೆಲಸ ಮಾಡುತ್ತಿರುವುದು ಆಘಾತ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಭಾವನೆಗೆ ಧಕ್ಕೆ ತರುವ, ಹಿಂದು ಹೋರಾಟ ಹತ್ತಿಕ್ಕುವ ಕಾರ್ಯ ನಿರಂತರ ನಡೆದಿದೆ. ಹಿಂದುಗಳ ಹತ್ಯೆ, ಹಿಂದುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿವೆ. ಸಮಾಜಘಾತುಕ ಶಕ್ತಿಗಳು ಸಕ್ರಿಯವಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕರುನಾಡು ಕ್ರಿಮಿನಲ್ ನಾಡು ಎಂಬAತಾಗಿದೆ ಎಂದು ಬೇಸರ ಹೊರಹಾಕಿದರು.

ಧರ್ಮಸ್ಥಳದಲ್ಲಿ ನೂರಾರು ಹೆಣಗಳು ಹೂತಿರುವ ಬಗ್ಗೆ ಯಾರೋ ಕೆಲವರು ಎಬ್ಬಿಸಿದ ಗೊಂದಲ, ಅನಾಮಿಕ ನೀಡಿದ ತಲೆಬುಡವಿಲ್ಲದ ದೂರಿನ ಮೇಲೆ ಅಸ್ಥಿಪಂಜರ ಶೋಧ ನೆಪದಲ್ಲಿ ಸರ್ಕಾರ ಯಾವುದೇ ಪೂರ್ವಾಪರ ವಿಚಾರ ಮಾಡದೆ, ಆತುರಾತುರದಲ್ಲಿ ತನಿಖೆಗೆ ಎಸ್‌ಐಟಿ ರಚನೆ ಮಾಡಿದ್ದೇ ಹಾಸ್ಯಾಸ್ಪದ. ತನಿಖೆ ಹೆಸರಿನಲ್ಲಿ ಸರ್ಕಾರ ಅನಗತ್ಯವಾಗಿ ಧರ್ಮಸ್ಥಳಕ್ಕೆ ಸಾರ್ವಜನಿಕವಾಗಿ ಕಳಂಕ ಹಚ್ಚುವ ಕೆಲಸ ಮಾಡಿದೆ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಧರ್ಮಸ್ಥಳದ ನೆಲದಿಂದಲೇ ಕರ್ನಾಟಕದ ಜನತೆಗೆ ಬಹಿರಂಗ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಅನಾಮಿಕ ಚನ್ನಯ್ಯ, ಸುಜಾತಾ ಭಟ್, ಯೂಟ್ಯೂಬರ್ ಮಹ್ಮದ್ ಸಮೀರ್ ಮುಂತಾದವರು ಇಲ್ಲಿ ಸೂತ್ರಧಾರಿಗಳಾಗಿದ್ದಾರೆ. ಇವರ ಹಿಂದಿರುವ ಪಾತ್ರಧಾರಿಗಳು ಯಾರು? ಇವರ ಬುಡ ಎಲ್ಲಿದೆ? ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬುದು ಬಯಲಿಗೆ ತರುವ ಅಗತ್ಯವಿದೆ. ದೂರುದಾರ ಅನಾಮಿಕ ಚನ್ನಯ್ಯ ಬುರುಡೆ ಬಿಟ್ಟಿದ್ದು ಬಯಲಾಗಿದೆ. ಎಸ್‌ಐಟಿ ಈತನಿಗೆ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಆದರೆ ಎಸ್ ಐಟಿಯಿಂದ ಇದರ ಹಿಂದಿನ ಜಾಡು ಪತ್ತೆ ಹಚ್ಚುವುದು ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಹಿಂದು ವಿರೋಧಿ ಷಡ್ಯಂತ್ರ ಮಾಡುವವರ ವಿರುದ್ಧ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಯಾರಿಗೂ ಇಲ್ಲ. ಹೀಗಾಗಿ ಇದರ ಹಿಂದಿನ ಸಮಾಜ ವಿರೋಧಿ, ಧರ್ಮ ವಿರೋಧಿ, ದೇಶ ವಿರೋಧಿಗಳ ಪತ್ತೆಗಾಗಿ ಕೇಂದ್ರದ ತನಿಖಾ ದಳದಿಂದ ತನಿಖೆ ನಡೆಸುವುದು ಅತಿ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜೆ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ, ಮಲ್ಲಪ್ಪ ದಾನಾ, ಅಶೋಕ ಮೇತ್ರೆ, ಬಸವರಾಜ ಹಳ್ಳೆ, ಸಿದ್ರಾಮಪ್ಪ ನಿಡೋದೆ, ದಯಾನಂದ ಘೂಳೆ, ಕೇರಬಾ ಪವಾರ, ಖಂಡೋಬಾ ಕಂಗಟೆ, ಸಂದೀಪ ಪಾಟೀಲ, ನಾಗನಾಥ ಮೋರ್ಗೆ, ಸಂಜು ಮುರ್ಕೆ, ರಾಜಪ್ಪ ಸೋರಳ್ಳಿ, ನಾಗನಾಥ ಬಿರಾದಾರ, ಪ್ರಕಾಶ ಜೀರ್ಗೆ, ಉದಯ ಸೋಲಪೂರೆ, ಗಣೇಶ ಕಾರೆಗಾವೆ, ಮೃತ್ಯುಂಜಯ, ಕಪಿಲ ಪಾಟೀಲ, ಶಿವರಾಜ ಕೋಳಿ, ಸಂಜು ವಡೆಯರ್, ಗುಂಡಪ್ಪ ಮುಧಾಳೆ, ಪ್ರವೀಣ ಕಾರಬಾರಿ, ಪ್ರದೀಪ ಬಾಬಳಿ, ಗೌತಮ ತಾಂದಳೆ, ಸುಜಿತ ರಾಠೋಡ, ಅಶೋಕ ಶಂಬೆಳ್ಳಿ, ಬಾಲಾಜಿ ಠಾವರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3