ಅರ್ಥಪೂರ್ಣವಾಗಿ 31ನೇ ವಿಶ್ವ ಆದಿವಾಸಿ ದಿನಾಚರಣೆ
ಬೀದರ್ :ಕರ್ನಾಟಕ ಗೊಂಡ ಆದಿವಾಸಿ ಸಂಘ ಹಾಗೂ ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ವತಿಯಿಂದ 31ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಶನಿವಾರ ನಗರದ ಮಹಾತ್ಮ ಬೊಮ್ಮಗೊಂಡೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ಕರ್ನಾಟಕ ಗೊಂಡ ಆದಿವಾಸಿ ಸಂಘದ ಉಪಾಧ್ಯಕ್ಷ ಪಂಡಿತ್ ಚಿದ್ರಿ, ಆದಿವಾಸಿಗಳು ಈ ದೇಶದ ಮೂಲ ವಂಶಸ್ಥರು. ಸ್ವತಂತ್ರ ಹೋರಾಟದಲ್ಲೂ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅರಣ್ಯ ಸಂಪತ್ತನ್ನು ಉಳಿಸಿ ಮುಂಬರುವ ಪೀಳಿಗೆಗೆ ನೀಡುವ ಕೆಲಸವನ್ನು ಆದಿವಾಸಿಗಳು ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಗೊಂಡ ಆದಿವಾಸಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಮಾತನಾಡಿ, ವಿಶ್ವದ ಆದಿವಾಸಿಗಳ ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಪರಿಸರ, ಮಾನವ ಹಕ್ಕುಗಳ ಸಂರಕ್ಷಣೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ದ್ಯೇಯದೊಂದಿಗೆ ವಿಶ್ವಸಂಸ್ಥೆ 23-12-1994 ರಲ್ಲಿ ತೆಗೆದುಕೊಂಡ ನಿರ್ಣಯದನ್ವಯ 1995 ರಿಂದ ಪ್ರತಿವರ್ಷ ಆಗಸ್ಟ್ 9 ರಂದು ವಿಶ್ವ ಆದಿವಾಸಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಇಂದು ಕರ್ನಾಟಕ ಗೊಂಡ ಆದಿವಾಸಿ ಸಂಘ ಹಾಗೂ ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದಿಂದ ಮಹಾತ್ಮಾ ಬೋಮ್ಮಗೊಂಡೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದ್ದೇವೆ ಎಂದರು.

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಅಧ್ಯಕ್ಷ ನಾರಾಯಣರಾವ್ ಭಂಗಿ ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ಆದಿವಾಸಿಗಳು ಒಗ್ಗಟ್ಟಾಗಿ ಕೆಲಸ ಮಾಡೋಣ. ಮುಂಬರುವ ವಿಶ್ವ ಆದಿವಾಸಿ ದಿನವನ್ನು ಎಲ್ಲರೂ ಸೇರಿ ಆಚರಿಸೋಣ ಎಂದರು.
ಟೋಕರಿ ಕೋಳಿ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಣಿಕ್ ನೆಳಗಿ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಸುಮಾರು ನಾಲ್ಕು ಆದಿವಾಸಿ ಸಮುದಾಯಗಳು ಬೀದರ ಜಿಲ್ಲೆಯಲ್ಲಿ ವಾಸಿಸುತ್ತವೆ. ಇವರೆಲ್ಲರನ್ನು ಒಗ್ಗೂಡಿಸಿದ ಶ್ರೇಯಸ್ಸು ಬಿ. ನಾರಾಯಣರಾವ್ ಹಾಗೂ ಕೆ. ಎಂ ಮೈತ್ರಿಯವರಿಗೆ ಸಲ್ಲುತ್ತದೆ. ಕಾಡನ್ನು ಉಳಿಸಿ ಬೆಳೆಸುವವರು ಆದಿವಾಸಿಗಳು. ನಮ್ಮ ಆದಿವಾಸಿ ಸಮುದಾಯದವರಿಗೆ ಸಾಕಷ್ಟು ಸೌಲಭ್ಯ ಸಿಗಬೇಕಾಗಿದೆ. ಆದ್ದರಿಂದ ಆದಿವಾಸಿಯ ಎಲ್ಲಾ ಸಮುದಾಯದವರು ಸಂಘಟಿತರಾಗಿ ಹೋರಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ ಮಲ್ಕಾಪುರ, ಟೋಕರಿ ಕೋಳಿ ಸಮಾಜ ಸಂಘದ ಉಪಾಧ್ಯಕ್ಷ ಸುನಿಲ್ ಖಾಶೇಂಪೂರ್, ಸಂಚಾಲಕ ಸುನಿಲ್ ಭಾವಿಕಟ್ಟಿ, ಗೊಂಡ ಹಾಗೂ ಟೋಕರೆ ಕೋಳಿ ಸಮುದಾಯದ ಮುಖಂಡರುಗಳಾದ ಈಶ್ವರ ಮಲ್ಕಾಪೂರ್, ಬಾಬುರಾವ್ ಖಾಶೇಂಪೂರ್,ರವಿಕುಮಾರ್ ಸಿರ್ಸಿ, ಜಗನ್ನಾಥ ಜಂಬಗಿ, ಪುಂಡಲೀಕರಾವ್ ಇಟಗಂಪಳ್ಳಿ, ವಿಜಯಕುಮಾರ್ ಡುಮ್ಮೆ, ಮಾಣಿಕ್ ನೆಳಗಿ, ದೀಪಕ್ ಚಿದ್ರಿ, ಭೋಮ್ಮಗೊಂಡ ಚಿಟ್ಟಾವಾಡಿ, ರಘುನಾಥ ಭೂರೆ, ರವಿ ಇಂಜಿನಿಯರ್, ಹಣಮಂತರಾವ್ ಘೋಡಂಪಳ್ಳಿ, ಚಂದ್ರಕಾಂತ್ ಫುಲೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
