ಕನ್ನಡ ಭಾಷೆಯ ಅಂತಸತ್ವದ ಕವಿ ಗಂಗನಪಳ್ಳಿ
ಪ್ರೊ.. ಪರಮೇಶ್ವರ ನಾಯಕ್
ಬೀದರ್ : ಆಶು ಕವಿಗಳಾಗಿ ಸಾನೆಟ್ ಮಾದರಿಯಲ್ಲಿ ಕಾವ್ಯ ರಚಿಸಿದ್ದ ದಿವಂಗತ ಎಂ ಜಿ ಗಂಗನಪಳ್ಳಿ ಅವರು ನಾಡಿನ ಕನ್ನಡ ಭಾಷೆಯ ಅಂತಸತ್ವದ ಕವಿಯಾಗಿದ್ದರು. ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು. ಇವರ ಸಹೋದರ ದಿವಂಗತ ರಾಮರಾವ್ ಗಂಗನಪಳ್ಳಿಯವರು ಬ್ಯಾಂಕ ಉದ್ಯೋಗಿ ಯಾಗಿದ್ದುಕೊಂಡು ಅಧ್ಯಾತ್ಮದ ಒಲವುಳ್ಳವರಾಗಿ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಂಗನಪಳ್ಳಿ ಸಹೋದರರ ಕೊಡುಗೆ ಮಹತ್ವದದಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್ ತಿಳಿಸಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಗಂಗನಪಳ್ಳಿ ಪರಿವಾರದ ಸಹಯೋಗದಲ್ಲಿ ದಿನಾಂಕ : 03..08..2025 ರಂದು ರವಿವಾರ ಬೆಳ್ಳಿಗೆ 11 ಗಂಟೆಗೆ ಹೋಟೆಲ್ ಉಡುಪಿ ಕೃಷ್ಣ ಮಹಾಲಕ್ಷ್ಮಿ ಸಭಾಂಗಣದಲ್ಲಿ “ಆಶುಕವಿ ದಿವಂಗತ ಎಂ.ಜಿ ಗಂಗನಪಳ್ಳಿ ಮತ್ತು ಸಾಹಿತಿ ದಿವಂಗತ ರಾಮರಾವ್ ಗಂಗನಪಳ್ಳಿ ಇವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ– ಉಪನ್ಯಾಸ– ಕವಿಗೋಷ್ಠಿ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ ವಹಿಸಿಕೊಂಡು ಮಾತನಾಡಿ ಗಂಗನಪಳ್ಳಿ ಸಹೋದರರು ರಚಿಸಿರುವ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಅವರ ಪರಿವಾರದವರ ಸಹಯೋಗದಲ್ಲಿ ಆಯೋಜಿಸಲಾಗುವುದು, ಈ ಮೂಲಕ ಇವರ ಸೇವೆ, ಸಾಧನೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಸಾಹಿತಿ ಡಾ. ಸುನೀತಾ ಕೂಡ್ಲಿಕರ್ ಅವರು ದಿವಂಗತ ಎಂ.ಜಿ ಗಂಗನಪಳ್ಳಿ ಅವರ ಸಾಹಿತ್ಯ ಕುರಿತು ಮಾತನಾಡುತ್ತಾ ನಾಡು ನುಡಿ, ಭಾಷೆ, ಪರಿಸರ, ಸಂತ ಮಹಾತ್ಮರ ಕುರಿತಾದ ಸುಮಾರು 54 ಪುಸ್ತಕಗಳನ್ನು ಎಂ. ಜಿ ಗಂಗನಪಳ್ಳಿ ಯವರು ರಚಿಸಿದ್ದಾರೆ. ಅವರ ಒಟ್ಟಾರೆ ಸಾಹಿತ್ಯ ಕೃತಿಗಳ ಸಮಗ್ರ ಅವಲೋಕನ ಪುಸ್ತಕವಾಗಿ ಸಂಜೀವಕುಮಾರ ಅತಿವಾಳೆ ಸಂಪಾದಿಸಿರುವ ಭಾವಗಂಗೆ ಪ್ರಕಟವಾಗಿದೆ ಎಂದು ವಿವರಿಸಿದರು.
ಸಾಹಿತಿ ದೇವಿದಾಸ ಜೋಶಿ ಅವರು ದಿವಂಗತ ರಾಮರಾವ್ ಗಂಗನಪಳ್ಳಿಯವರ ಸಾಹಿತ್ಯ ಕುರಿತು ಮಾತನಾಡಿ ಮಾಣಿಕ ಪ್ರಭು ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಡಾ. ಎಂ.ಜಿ ದೇಶಪಾಂಡೆ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ,ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಅವರುಗಳು ಗಂಗನಪಳ್ಳಿ ಅವರೊಂದಿಗಿನ ಒಡನಾಟದ ಹಾಗೂ ಅವರ ಸಾಹಿತ್ಯದ ಕುರಿತು ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಡಾ. ಗವಿಸಿದ್ದಪ್ಪ ಪಾಟೀಲ್ ಮಾತನಾಡಿ ಎಂ.ಜಿ ಗಂಗನಪಳ್ಳಿ ಯವರನ್ನು ಬೀದರ ಜಿಲ್ಲೆಗೆ ಸೀಮಿತಗೊಳಿಸಬೇಡಿ ಅವರು ರಾಜ್ಯಮಟ್ಟದ ಮಹತ್ವದ ಬರಹಗಾರರ ಸಾಲಿನಲ್ಲಿ ಸೇರುತ್ತಾರೆ, ಸಂತ ಕವಿಯಾಗಿ ಕನ್ನಡ ಭಾಷೆ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಡಾ. ಸಂಗಪ್ಪ ತೌಡಿ ಮಾತನಾಡಿ ರಾಮರಾವ್ ಗಂಗನಪಲ್ಲಿ ಗಂಗನಪಳ್ಳಿ ಬ್ಯಾಂಕಿನಲ್ಲಿ ಉದ್ಯೋಗ ಮಾಡಿದರು ಕೂಡ ಆಧ್ಯಾತ್ಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಜಾಲಿಂದರ ಗಂಗನಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಹೋದರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಇಬ್ಬರು ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಸಾಹಿತಿಗಳನ್ನ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು
ಪ್ರಥಮವಾಗಿ ಸ್ಥಾಪಿಸಿರುವ ಎಂ.ಜಿ ಗಂಗನಪಳ್ಳಿ ಕಾವ್ಯ ಪ್ರಶಸ್ತಿಯನ್ನು ಕಲ್ಬುರ್ಗಿ ಹಿರಿಯ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಅವರಿಗೆ ನಗದು ಹನ್ನೊಂದು ಸಾವಿರ ರೂಪಾಯಿ ಪ್ರಶಸ್ತಿ ಸ್ಮರಣಿಕೆ ನೀಡಿ ಹಾಗೂ ರಾಮರಾವ್ ಗಂಗನಪಳ್ಳಿ ಉದಯೋನ್ಮುಖ ಬರಹಗಾರ ಪ್ರಶಸ್ತಿಯನ್ನು ಮೀನಕೇರಾ ಗ್ರಾಮದ ಯುವ ಬರಹಗಾರ ಡಾ. ಸಂಗಪ್ಪ ತೌಡಿ ಅವರಿಗೆ ನಗದು ಐದು ಸಾವಿರ ರೂಪಾಯಿ ಪ್ರಶಸ್ತಿ ಸ್ಮರಣಿಕೆ ಪ್ರದಾನ ಮಾಡಿ ಗೌರವಿಸಲಾಯಿತು.

ಗಂಗನಪಳ್ಳಿ ಅವರು ಬರೆದ ಕಾವ್ಯವನ್ನು ಹಿರಿಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ ರೇಣುಕಾ ಎನ್ ಬಿ ಹಾಡಿದರು.
ಗಂಗನಪಳ್ಳಿ ಅವರ ಕುರಿತಾಗಿ ಕವಿಗಳಾದ ಎಸ್.ಎಸ್ ಹೊಡಮನಿ, ಡಾ. ರಾಮಚಂದ್ರ ಗಣಾಪುರ, ಡಾ.ಸುಬ್ಬಣ್ಣ ಕರಕನಳ್ಳಿ, ಕೀರ್ತಿಲತಾ ಹೊಸಾಳೆ, ಡಾ.ಎಂ ಮತ್ತುಂಬಿ, ಧನಲಕ್ಷ್ಮಿ ಪಾಟೀಲ್ ಹಲಸಿ, ಮುರಳಿನಾಥ ಮೇತ್ರೆ, ನರಸಪ್ಪ ಗೌನಳ್ಳಿ, ಆತ್ಮಾನಂದ ಬಂಬುಳಗೆ, ಮಾಯಾದೇವಿ ಗೋಖಲೆ, ಸಿದ್ದಮ್ಮ ಬಸಣ್ಣೂರ್, ಸಂಗೀತಾ ಕಾಂಬಳೆ, ಪ್ರಿಯಾಂಕಾ ಜಾಧವ್ ಅವರು
ಸ್ವರಚಿತ ಕವನ ವಾಚನ ಮಾಡಿದರು.
ಲಕ್ಷ್ಮಣ ಮೇತ್ರೆ ನಿರೂಪಿಸಿದರು, ಕುಪೇಂದ್ರ ಹೊಸಮನಿ ವಂದಿಸಿದರು.
