ನೂತನ ಸಂಗೀತ ಪಾಠಶಾಲೆ ಉದ್ಘಾಟನೆ
ಸಂಗೀತದಿಂದ ಶರೀರದಲ್ಲಿ ನವಚೈತನ್ಯ: ಡಾ. ಮಲ್ಲಿಕಾರ್ಜುನ ಚಟ್ನಳ್ಳಿ
ಬೀದರ್: ಸಂಗೀತ ಕಲಿಯುವುದರಿಂದ ಮತ್ತು ಆಲಿಸುವಿಕೆಯಿಂದ ವ್ಯಕ್ತಿಯ ಶರೀರ ಮತ್ತು ಮನಸ್ಸಿನಲ್ಲಿ ನವಚೈತನ್ಯ ತುಂಬುತ್ತದೆ ಎಂದು ಖ್ಯಾತ ನೇತ್ರ ತಜ್ಞ ಡಾ. ಮಲ್ಲಿಕಾರ್ಜುನ ಚಟ್ನಳ್ಳಿ ತಿಳಿಸಿದರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ವತಿಯಿಂದ ನಗರದ ಹಳೆ ನಾವದಗೇರಿಯ ಚಂದ್ರಶೇಖರ ಹೆಬ್ಬಾಳೆ ತೋಟದ ಮನೆಯಲ್ಲಿ ಆಯೋಜಿಸಿದ “ನೂತನ ಸಂಗೀತ ಪಾಠಶಾಲೆ” ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾಗತಿಕರಣ ಮತ್ತು ಆಧುನಿಕತೆಯ ಭರಾಟೆಯಲ್ಲಿ ವ್ಯಕ್ತಿ ವಿವಿಧ ರೋಗಗಳಿಗೆ ತುತ್ತಾಗುತಿದ್ದಾನೆ. ಒತ್ತಡದ ಬದುಕಿನಿಂದ ಮನುಷ್ಯ ವಿಶ್ರಾಂತಿ ಪಡೆಯಲು ಸಂಗೀತ ದಿವ್ಯೌಷಧಿಯಾಗಿದೆ. ಸಂಗೀತ ನಮಗರಿವಿಲ್ಲದಂತೆಯೇ ಆನಂದ ನೀಡುತ್ತದೆ. ಹಾಡು ಕೇಳುತ್ತಲೇ ಶರೀರದ ಅವಯವಗಳಲ್ಲಿ ರೋಮಾಂಚನ ಉಂಟಾಗಿ ಮನಸ್ಸಿನಲ್ಲಿ ನವಚೈತನ್ಯ ಮೂಡುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕು. ಏಕೆಂದರೆ ಇದರಿಂದ ಮಕ್ಕಳಿಗೆ ಸಂಸ್ಕಾರ ಲಭಿಸುತ್ತದೆ. ವಿನಯ, ಭಕ್ತಿ, ಪ್ರೀತಿ, ತಾಳ್ಮೆ ಜೊತೆಗೆ ಗುರು-ಶಿಷ್ಯರ ಭಾವನಾತ್ಮಕ ಪರಂಪರೆ ಬೆಳೆಯುತ್ತದೆ. ಚಂದ್ರಶೇಖರ ಹೆಬ್ಬಾಳೆ ಸಂಗೀತದ ಪೋಷಕರಾಗಿ ಸಮಾಜದಲ್ಲಿ ಧನಾತ್ಮಕ ಪರಿವರ್ತನೆಗಾಗಿ ದುಡಿಯುತ್ತಿದ್ದಾರೆ. ಅವರ ಕಾರ್ಯ ಇತರರಿಗೆ ಆದರ್ಶಪ್ರಾಯವಾಗಿದೆ ಎಂದು ಚಟ್ನಳ್ಳಿ ತಿಳಿಸಿದರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಗೌರವಾಧ್ಯಕ್ಷ ಪ್ರೊ. ಎಸ್.ವಿ.ಕಲ್ಮಠ ಪ್ರಾಸ್ತಾವಿಕ ಮಾತನಾಡಿ ಸಂಘವು ಎರಡು ದಶಕಗಳಿಂದ ಸಂಗೀತ ಕಲಾವಿದರನ್ನು ಪೋಷಿಸುವ ಕಾರ್ಯ ಮಾಡುತ್ತಾ ಬರುತ್ತಿದೆ. ಸಂಘದ ಅಡಿಯಲ್ಲಿ ಹೆಚ್ಚು ಮಕ್ಕಳಿಗೆ ಸಂಗೀತ ಕಲಿಸಬೇಕು ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ನೂತನ ಪಾಠಶಾಲೆ ಆರಂಭ ಮಾಡಲಾಗಿದೆ. ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಕ.ಕ. ಭಾಗದ ಅದರಲ್ಲೂ ಬೀದರ ಜಿಲ್ಲೆಯ ಕಲಾವಿದರು ದೇಶದ ತುಂಬಾ ಹೆಸರು ಮಾಡಬೇಕೆಂಬ ಉದ್ದೇಶದಿಂದ ಡಾ. ರಾಜಕುಮಾರ ಹೆಬ್ಬಾಳೆಯವರು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ಮಾಡುತಿದ್ದಾರೆ. ಕಲಾವಿದರು ತಮ್ಮ ಕಲೆ, ವಾದ್ಯ ಮತ್ತು ಸಂಗೀತದಿಂದ ಹೆಸರು ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ ಹಾಗೂ ಹಿರಿಯ ಕಲಾವಿದ ಪಂ. ರಾಮುಲು ಗಾದಗಿ ಮಾತನಾಡಿದರು. ದಿವ್ಯ ಸಾನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಸ್ವಾಮಿಜಿ ವಹಿಸಿದ್ದರು. ವೇದಿಕೆ ಮೇಲೆ ಗುತ್ತಿಗೆದಾರ ಸಚಿನ ಕೊಳ್ಳೂರು, ಪ್ರಮುಖರಾದ ಜಯರಾಜ ಖಂಡ್ರೆ, ಕಂಟೆಪ್ಪ ಗಂದಿಗುಡೆ, ಏಕನಾಥ ಸಿದ್ದೆಪುರೆ, ರಾಜೇಂದ್ರಸಿಂಗ್ ಪವಾರ, ಡಾ. ರಾಜೇಂದ್ರ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಶೋಕ ಹೆಬ್ಬಾಳೆ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಿಸಿದರೆ ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು. ಕೊನೆಯಲ್ಲಿ ಪಂ. ರಾಮುಲು ಗಾದಗಿಯವರ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ನೂರಾರು ಜನ ಕಲಾಸಕ್ತರು, ಕಲಾಪ್ರೇಮಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.