ಬೀದರ್‌ನಲ್ಲಿ ವಿಶ್ವ ರೇಬೀಸ್ ದಿನಾಚರಣೆ
ರೇಬಿಸ್ ಕಾಯಿಲೆ ತಡೆಗಟ್ಟಲು ಜನರು ಎಚ್ಚರ ವಹಿಸಿ – ಸುನೀಲ ಬಾವಿಕಟ್ಟಿ
ಬೀದರ್ ಸೆ 28ಃ ಸೆಪ್ಟೆಂಬರ್ 28 ಭಾನುವಾರ ಬೀದರದಲ್ಲಿ ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ ಚಂದ್ರಶೇಖರ್ ಆಜಾದ್ ಯುವಕ ಸಂಘದ ವತಿಯಿಂದ ಸಾರ್ವಜನಿಕರಿಗೆ ಕರ ಪತ್ರಗಳು ನೀಡುವ ಮೂಲಕ ಜನ ಜಾಗೃತಿ ಮೂಡಿಸಿ ರೇಬೀಸ್ ದಿನ ಆಚರಿಸಲಾಯಿತು.
ಹಳೆ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಸರಕಾರಿ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಜನರಿಗೆ ರೇಬೀಸ್ ತಡೆಗೆ ಸಂಬಂಧಿಸಿದ ಪ್ಯಾಂಫ್ಲೆಟ್‌ಗಳು ನೀಡುವ ಮೂಲಕ ಸ್ಥಳೀಯರಿಗೆ ಲಸಿಕೆ ಮತ್ತು ಚಿಕಿತ್ಸೆ ಕುರಿತು ಮಾಹಿತಿ ನೀಡಲಾಯಿತು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುನೀಲ ಬಾವಿಕಟ್ಟಿ ಅವರು ಮಾತನಾಡಿ, ರೇಬೀಸ್ ಕಾಯಿಲೆ ತಡೆಗಟ್ಟಲು ಜನರು ಎಚ್ಚರಿಕೆಯಿಂದ ಇರಬೇಕು. ನಾಯಿಗಳ ಕಚ್ಚುವಿಕೆ ಅಥವಾ ಇತರ ಪ್ರಾಣಿಗಳ ದಾಳಿಯಿಂದ ರೇಬೀಸ್ ಹರಡುವ ಸಾಧ್ಯತೆ ಇರುತ್ತದೆ. ತಕ್ಷಣವೇ ರೇಬೀಸ್ ಲಸಿಕೆ ಹಾಕಿಸಿಕೊಳ್ಳುವುದು, ಬೀದಿ ಪ್ರಾಣಿಗಳನ್ನು ಸಮರ್ಥವಾಗಿ ನಿರ್ವಹಿಸುವುದು ಹಾಗೂ ವೈದ್ಯರ ಸಲಹೆ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.

ಸಿಟಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮತ್ತೆ ಸರಕಾರಿ ಆಸ್ಪತ್ರೆಯ ಸುತ್ತಮುತ್ತಲಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿ, ಇಂತಹ ಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಆರೋಗ್ಯದ ಬಗ್ಗೆ ಜವಾಬ್ದಾರಿತನ ಬೆಳೆಸಲು ನೆರವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಂದ್ರಶೇಖರ್ ಆಜಾದ್ ಯುವಕ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಭಂಡೆ ಅವರು ಮಾತನಾಡಿ, ನಾಗರಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ನಮ್ಮ ಸಂಘದ ಪ್ರಮುಖ ಗುರಿಯಾಗಿದೆ. ವಿಶೇಷವಾಗಿ ಯುವಕರು, ಮಕ್ಕಳಿಗೆ ಪ್ರಾಣಿಗಳ ಜೊತೆ ವರ್ತಿಸುವಾಗ ಎಚ್ಚರಿಕೆ ಕ್ರಮಗಳನ್ನು ಕಲಿಸಬೇಕು. ಇದರಿಂದ ಸಮಾಜ ಆರೋಗ್ಯಕರವಾಗುತ್ತದೆ ಎಂದು ಹೇಳಿದರು.

ಯುವಕ ಸಂಘದ ಸದಸ್ಯರು ಮತ್ತು ಪ್ರಜ್ಞಾವಂತರು ಸೇರಿ ಸಾರ್ವಜನಿಕರಲ್ಲಿ ನೇರವಾಗಿ ಮಾಹಿತಿ ಹಂಚಿದರು. ತಕ್ಷಣದ ಚಿಕಿತ್ಸೆ ಕೇಂದ್ರಗಳ ವಿಳಾಸ, ಉಚಿತ ಲಸಿಕೆ ಕೇಂದ್ರಗಳ ಮಾಹಿತಿ, ಮತ್ತು ಸಲಹೆ, ರೇಬೀಸ್ ತಡೆಗಟ್ಟುವ ವಿಧಾನಗಳು, ನಾಯಿಗಳಿಗೆ ಲಸಿಕೆ ಹಾಕಿಸುವ ಅಗತ್ಯತೆಯ ಬಗ್ಗೆ ವಿವರಿಸಲಾಯಿತು.
ಅದೇ ಸಂದರ್ಭದಲ್ಲಿ ಬಾಬುರಾವ ಕುಂಬಾರ್, ಶರಣ ಬಸವ ಎಸ್, ಚಂದ್ರಶೇಖರ್ ಆಜಾದ್ ಯುವಕ ಸಂಘದ ಪದಾಧಿಕಾರಿಗಳಾದ ಮುಕುಂದ ಸೋನೆ, ರವಿ ಉಪ್ಪೆ, ರಾಬರ್ಟ್ ಕಪಲಾಪುರ, ಅಶ್ವಿನ್ ಹಳ್ಳದಕೇರಿ, ದಿಲೀಪ ಮೇತ್ರೆ, ಯುವಕರು ಅನೇಕರು ಸೇರಿ ಉಪಸ್ಥಿತರಿದ್ದರು.
——————
