ಆನ್‍ಲೈನ್ ಅಂಚೆ ಸೇವೆಗೆ ಚಾಲನೆ
ಬೀದರ್: ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳ ಆನ್‍ಲೈನ್ ಸೇವೆಗೆ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿದರು.
ಅಂಚೆ ಇಲಾಖೆಯು ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ (ಎಪಿಟಿ) ಅಭಿವೃದ್ಧಿಪಡಿಸಿದ್ದು, ಇಲಾಖೆಯ ವಿವಿಧ ಸೇವೆಗಳು ಇನ್ನು ಆನ್‍ಲೈನ್ ಮೂಲಕವೂ ದೊರೆಯಲಿವೆ ಎಂದು ಅವರು ತಿಳಿಸಿದರು.
ಬುಕ್ಕಿಂಗ್ ಹಾಗೂ ಡೆಲಿವರಿ ಆನ್‍ಲೈನ್ ಮೂಲಕ ಮಾಡಬಹುದು. ಗ್ರಾಹಕರು ಅಂಚೆ ಮೂಲಕ ವಸ್ತು ಕಳುಹಿಸಬೇಕಿದ್ದರೆ ಆನ್‍ಲೈನ್‍ನಲ್ಲಿ ಬುಕ್ ಮಾಡಬಹುದು. ಬುಕ್ ಮಾಡಿದ ನಂತರ ಪೋಸ್ಟ್‍ಮ್ಯಾನ್ ಮನೆಗೆ ಬಂದು ಪಾರ್ಸೆಲ್ ಪಡೆಯುತ್ತಾರೆ. ಪಾರ್ಸೆಲ್ ಕಳುಹಿಸಿದ ನಂತರ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಗ್ರಾಹಕರು ತಮ್ಮ ಪಾರ್ಸೆಲ್ ಎಲ್ಲಿದೆ ಎಂಬ ಮಾಹಿತಿ ಸಹ ಪಡೆಯಬಹುದು ಎಂದು ಹೇಳಿದರು.

ಪಾರ್ಸೆಲ್ ತಲುಪಿದ ನಂತರ ಪೋಸ್ಟ್‍ಮ್ಯಾನ್ ಗಾಹಕರ ಡಿಜಿಟಲ್ ಸಹಿ ಪಡೆಯುತ್ತಾರೆ. ಪಾರ್ಸೆಲ್ ತಲುಪಿಸಿದ ನಂತರ ಕಳುಹಿಸಿದವರಿಗೆ ಸಂದೇಶ ರವಾನೆಯಾಗುತ್ತದೆ. ಸಾಮಾನ್ಯ ಪತ್ರಗಳು, ಲಕೋಟೆಗಳನ್ನು ಕಳುಹಿಸಲು ಭವಿಷ್ಯದಲ್ಲಿ ಬಾರ್‍ಕೋಡ್ ಸೌಲಭ್ಯ ಒದಗಿಸಲಾಗುತ್ತದೆ. ಈ ಸೇವೆಯಡಿ ತಮ್ಮ ಲಕೋಟೆ, ಪತ್ರ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯನ್ನು ಗಾಹಕರು ಆನ್‍ಲೈನ್ ಮೂಲಕ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಆನ್‍ಲೈನ್ ಸೇವೆಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ಸಿಬ್ಬಂದಿಗೆ ಆನ್‍ಲೈನ್ ಸೇವೆಗಳ ಕುರಿತು ತರಬೇತಿ ಕೂಡ ನೀಡಲಾಗಿದೆ ಎಂದು ಹೇಳಿದರು.
ಉಪ ಅಂಚೆ ಅಧೀಕ್ಷಕ ಲೆಫ್ಟಿನೆಂಟ್ ಕರ್ನಲ್ ನಾಗರಾಜ, ರಾಜೇಂದ್ರ ವಗ್ಗೆ, ಪ್ರಕಾಶ ಗೌಳಿ, ಅಭಿನವ, ಪುರೋಹಿತ, ಚಿದಾನಂದ ಕಟ್ಟಿ ಮತ್ತಿತರರು ಇದ್ದರು. ಸುಭಾಷ್ ದೊಡ್ಡಿ ನಿರೂಪಿಸಿದರು.
ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ವಂದಿಸಿದರು.
——————