ಕಮಲನಗರ ಕೆಪಿಎಸ್ ಶಾಲೆಗೆ ಶಾಸಕ ಪ್ರಭು ಚವ್ಹಾಣ ಚಾಲನೆ
—
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕಮಲನಗರ ಕರ್ನಾಟಕ ಪಬ್ಲಿಕ್ ಶಾಲೆಗೆ(ಕೆಪಿಎಸ್) ಶನಿವಾರ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಕಮಲನಗರದಲ್ಲಿ ಸರ್ಕಾರಿ ಪ್ರೌಢಶಾಲೆಯ ಕೊರತೆಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿತ್ತು. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳಿಗೆ ಹತ್ತಾರು ಪತ್ರಗಳನ್ನು ಬರೆದಿದ್ದೇನೆ. ಖುದ್ದಾಗಿ ಭೇಟಿ ನೀಡಿದ್ದೇನೆ. ಎಲ್ಲ ಪ್ರಯತ್ನಗಳಿಂಗಾಗಿ ಕೆಪಿಎಸ್ ಶಾಲೆ ಮಂಜೂರಾಗಿದೆ. ಇನ್ನು ಮುಂದೆ ತಾಲ್ಲೂಕಿನ ಬಡ ಮಕ್ಕಳು ಯಾವುದೇ ಶುಲ್ಕದ ಹೊರೆಯಿಲ್ಲದೇ ನಿರಾತಂಕವಾಗಿ ವಿದ್ಯಾಭ್ಯಾಸ ಮಾಡಬಹುದು ಎಂದು ಹೇಳಿದರು.
ಈ ಶಾಲೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಗೆ ಜನತೆ ಮತ್ತು ಶಿಕ್ಷಕರ ಮೇಲಿದೆ. ಈ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಶಾಲೆಯ ಶಿಕ್ಷಕರೊಂದಿಗೆ ಮನೆ-ಮನೆಗೆ ಸುತ್ತಾಡಿ ದಾಖಲಾತಿ ಪಡೆಯಬೇಕು. ಈ ವರ್ಷವೇ ಶೇ.100ರಷ್ಟು ದಾಖಲಾತಿಯಾಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದು ಶಿಕ್ಷಣಕ್ಕಾಗಿ ಏನೇನು ಬೇಕು ಎಲ್ಲವನ್ನೂ ಒದಗಿಸಿದ್ದೇನೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸರಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಹಿಂದೆ ಕ್ಷೇತ್ರದಲ್ಲಿ ಶಿಕ್ಷಣ ತೀವ್ರ ಹಿಂದುಳಿದಿತ್ತು. ನಾನು ಶಾಸಕನಾದ ನಂತರ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಕರ ಮನೋಬಲ ವೃದ್ಧಿಸುವುದು, ಸಭೆಗಳನ್ನು ನಡೆಸುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಕಾಣಿಸಿದೆ. ಆದರೆ ಪ್ರಸಕ್ತ ಸಾಲಿನ ಫಲಿತಾಂಶ ತೀವ್ರ ಕುಸಿದಿದ್ದು ಬಹಳಷ್ಟು ನೋವುಂಟಾಗಿದೆ. ಫಲಿತಾಂಶ ಸುಧಾರಣೆಗೆ ಉಪ ನಿರ್ದೇಶಕರು ಮುತುವರ್ಜಿ ವಹಿಸಬೇಕು. ಸರಿಯಾಗಿ ಕೆಲಸ ಮಾಡದ ಶಿಕ್ಷಕರನ್ನು ಅಮಾನತುಗೊಳಿಸುವುದು ಅಥವಾ ವರ್ಗಾವಣೆಯಂತಹ ಕಠಿಣ ಕ್ರಮ ಜರುಗಿಸಬೇಕೆಂದು ನಿರ್ದೇಶನ ನೀಡಿದರು.
ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಸಾಕಷ್ಟಿದೆ. ಹೆಚ್ಚು ಮಕ್ಕಳಿರುವ ಕಡೆ ಶಿಕ್ಷಕರ ಕೊರತೆಯಿದೆ. ಮಕ್ಕಳಿಲ್ಲದ ಕಡೆ ಹೆಚ್ಚು ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಅವ್ಯವಸ್ಥೆ ಸುಧಾರಿಸುವಂತೆ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಬದಲಾವಣೆ ಕಾಣಿಸಿಲ್ಲವೆಂದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬೇಸರ ಹೊರಹಾಕಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ ಪ್ರಾಸ್ತಾವಿಕ ಮಾತನಾಡಿ, ಶಾಸಕರ ಪ್ರಯತ್ನದಿಂದ ತಾಲ್ಲೂಕಿಗೆ ಕೆಪಿಎಸ್ ಶಾಲೆ ಮಂಜೂರಾಗಿದೆ. ಇದನ್ನು ಉಳಿಸಲು ಸಾರ್ವಜನಿಕರು ಮುಂದಾಗಬೇಕು. ಇಲ್ಲಿ ಎಲ್.ಕೆ.ಜಿ ಯಿಂದ ಎಸ್ಸೆಸ್ಸೆಲ್ಸಿ ವರೆಗೆ ಎಲ್ಲ ಮಾಧ್ಯಮಗಳಲ್ಲಿ ಶಿಕ್ಷಣ ಕೊಡಲಾಗುತ್ತದೆ. ಲಕ್ಷಾಂತರ ವ್ಯಯಿಸಿ ಖಾಸಗಿ ಶಾಲೆಗೆ ಹೋಗುವ ಬದಲು ಕೆಪಿಎಸ್ ಶಾಲೆಗೆ ಮಕ್ಕಳನ್ನು ದಾಖಲು ಮಾಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗೇಶ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ ಸಜ್ಜನಶೆಟ್ಟಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ಗಿರೀಶ ವಡೆಯರ್, ಸೂರ್ಯಕಾಂತ ಬಿರಾದಾರ, ಶಿವಕುಮಾರ ಝುಲ್ಪೆ, ಮಲ್ಲಿಕಾರ್ಜುನ ದಾನಾ, ರಂಗರಾವ ಜಾಧವ ಸೇರಿದಂತೆ ಇತರರಿದ್ದರು. ಇದೇ ವೇಳೆ ಶಾಸಕರು ಮಕ್ಕಳಿಗೆ ಸಿಹಿ ತಿನ್ನಿಸಿದರು.