—
ಬೀದರ್: ಬರುವ ದಿ. 6 ರಂದು ಬಕ್ರೀದ್ ನಡೆಯಲಿದೆ. ಈ ವೇಳೆ ಯಾವುದೇ ಕಾರಣಕ್ಕೂ ಅಕ್ರಮವಾಗಿ ಗೋ ಹತ್ಯೆ ಹಾಗೂ ಗೋವುಗಳ ಸಾಗಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಜರಂಗ ದಳ ಘಟಕ ಒತ್ತಾಯಿಸಿದೆ.
ಬಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣಾ ಸೋರಳ್ಳಿ ಆಣದೂರ ನೇತೃತ್ವದ ನಿಯೋಗ ಗುರುವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿ, ಬಕ್ರೀದ್ ವೇಳೆ ಕುರ್ಬಾನಿ ಹೆಸರಿನಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡುವ ಕಾನೂನು ವಿರೋಧಿ ಹಾಗೂ ಅನಾಗರಿಕ ಪವೃತ್ತಿ ಜೀವಂತವಿಡುವ ಬೆಳವಣಿಗೆ ನಡೆಯುವ ಸಾಧ್ಯತೆಗಳಿವೆ. ಏಕೆಂದರೆ ಬಕ್ರೀದ್ ವೇಳೆ ಇಂತಹ ಬೆಳವಣಿಗೆ ಹಿಂದೆಲ್ಲ ಸಾಕಷ್ಟು ನಡೆದಿವೆ. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಬಕ್ರೀದ್ ವೇಳೆ ಗೋಹತ್ಯೆಯಾಗಲಿ, ಅಕ್ರಮ ಗೋವುಗಳ ಸಾಗಾಟವಾಗಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ-2020 ಜಾರಿಯಲ್ಲಿದೆ. ಈ ಕಾಯ್ದೆಯಲ್ಲಿ ಗೋ ಹತ್ಯೆ ತಡೆಗೆ ಹಾಗೂ ಅಕ್ರಮ ಗೋ ಸಾಗಾಟದ ವಿರುದ್ಧ ಕಠಿಣ ಕ್ರಮಕ್ಕೆ ಸಂವಿಧಾನಬದ್ಧವಾಗಿ ಕಾನೂನು ಪ್ರಕಾರ ಅವಕಾಶವಿದೆ.ಈ ಕಾಯ್ದೆಯ ಪ್ರಕಾರ ಎಲ್ಲಿಯೂ ಗೋ ಹತ್ಯೆಗೆ ಅವಕಾಶ ಇಲ್ಲ. ಗೋ ಹತ್ಯೆ ಮಾಡಿದವರಿಗೆ ಹಾಗೂ ಇವುಗಳ ಸಾಗಣೆ ಮಾಡಿದವರಿಗೆ, ಮಾರಾಟ ಮಾಡಿದವರಿಗೆ, ಸಹಕರಿಸಿದವರಿಗೂ ಸಹ ಕಠಿಣ ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ. ಈ ಕಾಯ್ದೆ ಜಾರಿಗೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬೀದರ್ ನಗರ ಸೇರಿದಂತೆ ಜಿಲ್ಲಾದ್ಯಂತ ಗೋ ಹತ್ಯೆ ನಡೆಯದಂತೆ ನೋಡಿಕೊಳ್ಳಬೇಕು. ಗೋ ಹತ್ಯೆ ನಿಷೇಧ-2020ರ ಕಾಯ್ದೆಯ ಜಾರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದು ಗಮನ ಸೆಳೆಯಲಾಗಿದೆ.

ಬೀದರ್ ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿಯಲ್ಲಿದೆ. ಹೀಗಾಗಿ ಇಲ್ಲಿಂದ ಅಕ್ರಮವಾಗಿ ವಿವಿಧೆಡೆ ಗೋವುಗಳ ಸಾಗಾಟ ಹೆಚ್ಚಾಗಿ ನಡೆಯಬಹುದಾಗಿದೆ. ಇದರ ಮೇಲೆ ತೀವ್ರ ನಿಗಾ ಇರಿಸುವ ಅಗತ್ಯವಿದೆ. ಗೋವುಗಳು ಮಾತ್ರವಲ್ಲ ಒಂಟೆ ಅಕ್ರಮ ಸಾಗಣೆ, ಒಂಟೆ ಹತ್ಯೆ ಮಾಡುವ ಪ್ರಕರಣ ಸಹ ಇಲ್ಲಿ ಈ ಹಿಂದೆ ನಡೆದಿವೆ. ಇದರ ಮೇಲೂ ನಿಗಾ ಇಡುವ ಅಗತ್ಯವಿದೆ. ಗೋವುಗಳ ಅಕ್ರಮ ಸಾಗಣೆ ವಾಹನ ತಪಾಸಣೆ ಹಾಗೂ ಅಂತಹ ವಾಹನ ಜಪ್ತಿ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಗೋ ಹತ್ಯೆ ತಡೆ ಹಾಗೂ ಅಕ್ರಮ ಗೋ ಸಾಗಾಟ ತಡೆಯಲು ಪೊಲೀಸ್ ಇಲಾಖೆ ಸಹ ಅಲಟ್೯ ಇರಬೇಕು. ವಿವಿಧೆಡೆ ಇರುವ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಚುರುಕುಗೊಳಿಸಲು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಬಜರಂಗ ದಳ ಜಿಲ್ಲಾ ಸಹ ಸಂಯೋಜಕ, ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಯದಲಾಪುರೆ, ಉಪಾಧ್ಯಕ್ಷ ಸಂಗಮೇಶ ಮಮಶೆಟ್ಟಿ, ಹಿಂದುಪರ ಸಂಘಟನೆ ಮುಖಂಡ ವೀರಶೆಟ್ಟಿ ಖ್ಯಾಮಾ, ಪ್ರಮುಖರಾದ ಸಾಯಿನಾಥ ಮೂಲಗೆ, ಮಲ್ಲಿಕಾರ್ಜುನ ಮದರಗಿಕರ್, ರೋಹಿತ್ ಮಂಗಲಗಿ, ಆಕಾಶ ಜ್ಞಾನಪನೋರ್, ಸಾಯಿನಾಥ ಮಂಗಲಗಿ ಇತರರಿದ್ದರು.
——–
(ಕೋಟ್)
ಜಿಲ್ಲಾಡಳಿತ ಕೂಡಲೇ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ದೇಶನ ನೀಡಬೇಕು. ಸರ್ಕಾರದ ಕಾಯ್ದೆ ಉಲ್ಲಂಘಿಸಿ ಗೋ ಹತ್ಯೆ ಅಥವಾ ಗೋ ಸಾಗಾಟ ಮಾಡುವ ಪ್ರಕರಣಗಳು ನಡೆಸುತ್ತಿರುವುದು ಗಮನಕ್ಕೆ ಬಂದರೆ ಸಂಘಟನೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯ.
–ಭೀಮಣ್ಣಾ ಸೋರಳ್ಳಿ ಆಣದೂರ
ಬಜರಂಗ ದಳ ಜಿಲ್ಲಾ ಸಂಯೋಜಕ
—-
(ಕೋಟ್)
ಬಕ್ರೀದ್ ವೇಳೆ ಕೆಲವು ಸೀಮಿತ ಪ್ರದೇಶಗಳಲ್ಲಿ ಅಕ್ರಮವಾಗಿ ಗೋ ಹತ್ಯೆ ಹೆಚ್ಚಾಗಿ ನಡೆಯುವ ಸಾಧ್ಯತೆಗಳಿವೆ. ಅಂತಹ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು ಗೋ ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ ಅನ್ವಯ ಕಠಿಣ ಕ್ರಮಕ್ಕೆ ಮುಂದಾಗಬೇಕು. ಯಾವ ಕಾರಣಕ್ಕೂ ಗೋ ಹತ್ಯೆಗೆ, ಸಾಗಾಟಕ್ಕೆ ಅವಕಾಶ ನೀಡಕೂಡದು.
–ವೀರಶೆಟ್ಟಿ ಖ್ಯಾಮಾ
ಹಿಂದುಪರ ಸಂಘಟನೆ ಮುಖಂಡ
