ಅಂಚೆ ಇಲಾಖೆ ಸಾಧಕರಿಗೆ ಸತ್ಕಾರ: ಚಿತಕೋಟೆ ಹೇಳಿಕೆ
ಅಂಚೆ ಇಲಾಖೆಯಿಂದ ಬಹುಮುಖಿ ಸೇವೆ
ಅಂಚೆ ಇಲಾಖೆಯಿಂದ ಬಹುಮುಖಿ ಸೇವೆ
ಬೀದರ್: ಅಂಚೆ ಇಲಾಖೆಯಲ್ಲಿ ಅತ್ಯುನ್ನತ ಸಾಧನೆಗೈದ ಸಿಬ್ಬಂದಿಯನ್ನು ಇಲ್ಲಿಯ ಕರ್ನಾಟಕ ಪದವಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಸತ್ಕರಿಸಲಾಯಿತು.
ಉಳಿತಾಯ ಉತ್ಸವ, ಉಳಿತಾಯೋತ್ಕರ್ಷ, ಚಾರ್ ದಿನ್ ಚಾರ್ ಲಾಖ್, ಸಾಮ್ರಾಟ್, ಇಂಡಿಯನ್ ಪೊಸ್ಟಲ್ ಪೇಮೆಂಟ್ ಬ್ಯಾಂಕ್ ಕಾರ್ಯಗಳಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಬೀದರ್ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಶಾಲು ಹೊದಿಸಿ ಸನ್ಮಾನಿಸಿ, ಪ್ರೋತ್ಸಾಹಿಸಿದರು.
ಅಂಚೆ ಇಲಾಖೆ ಈಗ ಬಹುಮುಖಿ ಸೇವೆ ನೀಡುತ್ತಿದೆ. ಒಂದೇ ಸೂರಿನಡಿ ಅಂಚೆ ಸೇವೆ ಜತೆಗೆ ಆರ್ಥಿಕ ಸೇವೆ, ಜೀವ ವಿಮೆ, ಆಧಾರ್ ನೋಂದಣಿ, ಪಾಸ್‍ಪೋರ್ಟ್ ನೋಂದಣಿ ಮತ್ತಿತರ ಸೇವೆಗಳನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ಉತ್ತಮ ಕಾರ್ಯದ ಮೂಲಕ ಇಲಾಖೆಯ ಕೀರ್ತಿ ಹೆಚ್ಚಿಸಿದ ಸಿಬ್ಬಂದಿ ಇತರರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಪಾಟೀಲ ಅವರು ಅಂಚೆ ಇಲಾಖೆಯ ಅಚ್ಚುಕಟ್ಟಾದ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಇಲಾಖೆಯ ಮಂಗಲಾ ಭಾಗವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ ಫುಲೆ, ಯುಪಿಎ ಅಂಚೆ ಅಧೀಕ್ಷಕ ವಂಶಿ ರಾಮಕೃಷ್ಣ, ನಿರೀಕ್ಷಕ ವೆಂಕಟ ಉಪಸ್ಥಿತರಿದ್ದರು.
ಸುಭಾಷ್ ದೊಡ್ಡಿ ಸ್ವಾಗತಿಸಿದರು. ಗೌಸಿಯ ಬಾನು ಮತ್ತು ಗಾಯತ್ರಿ ಲಡ್ಡ ನಿರೂಪಿಸಿದರು. ಕಲ್ಲಪ್ಪ ಕೋಣಿ ವಂದಿಸಿದರು.