ಕರ್ನಾಟಕ ಸಿವಿಲ್ ಇಂಜಿನಿಯರ್ ಪರಿಷತ್‍ಗೆ ಹಾವಶೆಟ್ಟಿ ನೇಮಕ
ಬೀದರ್: ರಾಜ್ಯ ಸರ್ಕಾರ ಹೊಸದಾಗಿ ಕರ್ನಾಟಕ ವೃತ್ತಿ ಪರ ಸಿವಿಲ್ ಇಂಜಿನಿಯರ್‍ಗಳ ಪರಿಷತ್ (ಕರ್ನಾಟಕ ಪೆÇ್ರಫೆಷನಲ್ ಸಿವಿಲ್ ಇಂಜಿನಿಯರ್ಸ್ ಕೌನ್ಸಿಲ್) ಸ್ಥಾಪನೆ ಮಾಡಿದ್ದು, ಕಲಬುರಗಿ ವಿಭಾಗದಿಂದ ಇಲ್ಲಿಯ ಹಿರಿಯ ಸಿವಿಲ್ ಇಂಜಿನಿಯರ್ ಹಾವಶೆಟ್ಟಿ ಪಾಟೀಲ್ ಅವರಿಗೆ ಇದರ ಸದಸ್ಯರನ್ನಾಗಿ ನೇಮಿಸಲಾಗಿದೆ.
ಒಟ್ಟು 18 ಸದಸ್ಯರನ್ನು ಹೊಂದಿರುವ ಪರಿಷತ್ ಇದಾಗಿದೆ. ಇದರಲ್ಲಿ 10 ಸದಸ್ಯರಿಗೆ ರಾಜ್ಯದ ನಾಲ್ಕು ವಲಯದಿಂದ ಚುನಾಯಿತ ಮೂಲಕ ಹಿರಿಯ ಸಿವಿಲ್ ಇಂಜಿನಿಯರ್‍ಗಳನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಕಲಬುರಗಿ ವಲಯದ ಇಬ್ಬರಲ್ಲಿ ಹಾವಶೆಟ್ಟಿ ಪಾಟೀಲ್ ಒಬ್ಬರಾಗಿದ್ದಾರೆ. ಎರಡು ವರ್ಷಗಳ ಅವಧಿಗಾಗಿ ಈ ನೇಮಕ ಮಾಡಿ ಲೋಕೋಪಯೋಗಿ ಇಲಾಖೆ (ಕಟ್ಟಡಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಿ.ರಾಜಶೇಖರ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳ ಮಸೂದೆ-2024ಕ್ಕೆ ಒಂದು ವರ್ಷದ ಹಿಂದೆಯೇ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅನುಮೋದಿಸಿತ್ತು. ಇದಾದ ಬಳಿಕ ಅಧಿಕೃತವಾಗಿ ಈ ಪರಿಷತ್ತಿಗೆ ಸದಸ್ಯರ ನೇಮಕ ಪ್ರಕ್ರಿಯೆ ನಡೆಸಿದೆ. ಇನ್ಮುಂದೆ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳು ಈ ಪರಿಷತ್ತಿನ ಅಡಿಯಲ್ಲಿ ನೋಂದಾಯಿತರಾಗಬೇಕು. ಪ್ರಮಾಣಪತ್ರ ಹೊಂದಿರುವ ಸಿವಿಲ್ ಇಂಜಿನಿಯರ್‍ಗಳು ಪ್ರಮಾಣೀಕರಿಸಿದ ವಿನ್ಯಾಸ, ಕಟ್ಟಡಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗುವುದು. ಕಟ್ಟಡಗಳ ಗುಣಮಟ್ಟತೆ, ಉತ್ತಮ ಕಾಮಗಾರಿ ಉದ್ದೇಶದ ಜೊತೆಯಲ್ಲಿಯೇ ವೃತ್ತಿಪರ ಸಿವಿಲ್ ಇಂಜಿನಿಯರ್‍ಗಳಿಗೆ ಸೂಕ್ತ ತರಬೇತಿ, ತಾಂತ್ರಿಕ ಮಾರ್ಗದರ್ಶನ ಇನ್ನಿತರೆ ಕಾರ್ಯಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರ ಪರಿಷತ್ ಸ್ಥಾಪಿಸಿದೆ. ಪರಿಷತ್ ಮೊದಲ ತಂಡದಲ್ಲೇ ಜಿಲ್ಲೆಯಿಂದ ಹಾವಶೆಟ್ಟಿ ಪಾಟೀಲ್ ಅವರಿಗೆ ಸ್ಥಾನ ಸಿಕ್ಕಿರುವುದು ವಿಶೇಷವಾಗಿದೆ.

ಬೆಂಗಳೂರು ವಲಯದಿಂದ ನಾಲ್ವರು, ಬೆಳಗಾವಿ, ಕಲಬುರಗಿ, ಮೈಸೂರು ವಲಯದಿಂದ ತಲಾ ಇಬ್ಬರು ಚುನಾಯಿತ ಸದಸ್ಯರಿಗೆ ಪರಿಷತ್ತಿನಲ್ಲಿ ಸ್ಥಾನ ಕಲ್ಪಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಮುಖ್ಯ ಅಭಿಯಂತರ, ರಾಜ್ಯ ನಗರ ಯೋಜನಾ ಇಲಾಖೆ ಅಪರ ನಿರ್ದೇಶಕ, ವಿಟಿಯು ಬೆಂಗಳೂರು ಕಾಲೇಜಿನ ಪ್ರಾಚಾರ್ಯ, ಜಲಸಂಪನ್ಮೂಲ ಇಲಾಖೆ ಮುಖ್ಯ ಅಭಿಯಂತರ, ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಅಭಿಯಂತರ ಸೇರಿ ಎಂಟು ಅಧಿಕಾರಿಗಳನ್ನು ಸಹ ಸರ್ಕಾರ ತಂಡಕ್ಕೆ ನಾಮನಿರ್ದೇಶನ ಮಾಡಿದೆ.
ಹಾವಶೆಟ್ಟಿ ಪಾಟೀಲ್ ಅವರು ಕಳೆದ ಮೂರು ದಶಕಗಳಿಂದ ಗಡಿ ಜಿಲ್ಲೆಯಲ್ಲಿ ವೃತ್ತಿ ಪರ ಸಿವಿಲ್ ಇಂಜಿನಿಯರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಸಲ ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಎಸಿಇ) ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇಂಡಿಯನ್ ಕಾಂಕ್ರಿಟ್ ಇನ್‍ಸ್ಟಿಟ್ಯೂಟ್(ಐಸಿಐ) ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಎಸಿಸಿಇಐ ಎಮಿನೆಂಟ್ ಇಂಜಿನಿಯರ್, ವಿಶ್ವೇಶ್ವರಯ್ಯ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ವೃತ್ತಿ ಪರ ಸಿವಿಲ್ ಇಂಜಿನಿಯರ್ ಪರಿಷತ್ತಿಗೆ ರಾಜ್ಯ ಸರ್ಕಾರ ಇವರನ್ನು ನೇಮಿಸಿದ್ದಕ್ಕಾಗಿ ಸಿವಿಲ್ ಇಂಜಿನಿಯರ್ ಬಳಗ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದೆ.
