Saturday, January 17, 2026
HomePopularಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವ ಸಮಾರೋಪ: ಹುಲಸೂರು ಶ್ರೀ ಹೇಳಿಕೆ ಧರ್ಮ, ಸಮಾಜ ಕಟ್ಟಿದ್ದ ಅಕ್ಕ

ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವ ಸಮಾರೋಪ: ಹುಲಸೂರು ಶ್ರೀ ಹೇಳಿಕೆ ಧರ್ಮ, ಸಮಾಜ ಕಟ್ಟಿದ್ದ ಅಕ್ಕ

ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವ ಸಮಾರೋಪ: ಹುಲಸೂರು ಶ್ರೀ ಹೇಳಿಕೆ
ಧರ್ಮ, ಸಮಾಜ ಕಟ್ಟಿದ್ದ ಅಕ್ಕ

ಬೀದರ್: ಅಕ್ಕ ಅನ್ನಪೂರ್ಣತಾಯಿ ಶಾಲಾ, ಕಾಲೇಜುಗಳನ್ನು ಕಟ್ಟಲಿಲ್ಲ. ಧರ್ಮ, ಸಮಾಜವನ್ನು ಕಟ್ಟಿದ್ದರು. ಶೇ 100ಕ್ಕೆ 100 ರಷ್ಟು ಧರ್ಮ ಪ್ರಚಾರಕರಾಗಿದ್ದರು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಬಣ್ಣಿಸಿದರು.
ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ಸಂಜೆ ನಡೆದ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಸಿದ್ಧರಾಮೇಶ್ವರರ ವಚನ ಅಕ್ಕ ಅನ್ನಪೂರ್ಣತಾಯಿಗೆ ಅನ್ವಯಿಸುತ್ತದೆ. ಅವರು ಬಸವ ತತ್ವಗಳಿಗೆ ಆದರ್ಶರಾಗಿ ಬದುಕಿದ್ದರು ಎಂದು ಹೇಳಿದರು.
ಅಕ್ಕನವರ ಹೆಸರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡುವ ವ್ಯವಸ್ಥೆಯಾಗಬೇಕು. ಅದನ್ನು ಮಹಿಳಾ ಸಾಧಕರಿಗೆ ಕೊಟ್ಟು ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.
ಅಕ್ಕನವರು ಕೂಡಲಸಂಗಮದ ಬಸವಣ್ಣನವರ ಐಕ್ಯಮಂಟಪದಲ್ಲಿ ಸ್ವತಃ ನಿರಂಜನ ಜಂಗಮ ದೀಕ್ಷೆ ಪಡೆದು, ಪ್ರಭುದೇವ ಸ್ವಾಮೀಜಿ ಅವರಿಗೂ ನಿರಂಜನ ದೀಕ್ಷೆ ನೀಡಿದ್ದು ದಾಖಲಾತ್ಮಕ ಸಂಗತಿ ಎಂದರು.
ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಅಕ್ಕನವರು ನಮ್ಮೆಲ್ಲರ ಮನದ ಮೈಲಿಗೆ ತೊಳೆಯಲು ಬಂದವರು. ಪರಸ್ಪರ ಪ್ರೀತಿಸಲು ಕಲಿಸುವ ವಚನಗಳ ಸೆರಗು ಹಿಡಿದು ನಾವು ನಡೆಯಬೇಕಿದೆ. ಇಂದು ಅಕ್ಕನವರ ಉಸಿರಿಲ್ಲ. ಆದರೆ, ಹೆಸರಿದೆ. ಅವರ ಆದರ್ಶಗಳು ನಮ್ಮ ಮುಂದಿವೆ ಎಂದು ಹೇಳಿದರು.
ಅಕ್ಕ ಬದುಕಿನ ಕೊನೆ ಉಸಿರೆಳೆಯುವ ಮುನ್ನ 116 ದಿನ ಪ್ರವಚನದ ಬಾವನ್ನ ಬಸವಣ್ಣ ಪುಸ್ತಕ ಪ್ರಕಟವಾಗಬೇಕೆಂಬ ಇಚ್ಛೆ ಭಾಲ್ಕಿ ಶ್ರೀಗಳಿಗೆ ಹೇಳಿದ್ದು ಅವರ ಸಮರ್ಪಣೆ ಔನತ್ಯ ತೋರಿಸುತ್ತದೆ ಎಂದು ತಿಳಿಸಿದರು.
ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಸುಭಾಷ್‍ಚಂದ್ರ ನಾಗರಾಳೆ ಮಾತನಾಡಿ, ಅಕ್ಕ ಆಕಾಶದ ಧ್ರುವತಾರೆ. ಪುಣ್ಯದಂತೆ ಬಂದು ಜ್ಞಾನದಂತೆ ಹೋದರು. ಅವರು ಹಚ್ಚಿದ ಜ್ಯೋತಿ ನಂದಲು ಸಾಧ್ಯವಿಲ್ಲ. ಇನ್ನೂ ಪ್ರಖರವಾಗಿ ಬೆಳಗಲಿದೆ ಎಂದು ಹೇಳಿದರು.
ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸವ ಹಂಗರಗಿ, ಮಾಣಿಕಪ್ಪ ಗೋರನಾಳೆ ಅವರು ಅಕ್ಕನವರೊಂದಿಗಿನ ತಮ್ಮ ಒಡನಾಟ, ಅಕ್ಕನವರ ಮಾನವೀಯ ಗುಣಗಳ ಕುರಿತು ಹೇಳಿದಾಗ ಸಭೆಯಲ್ಲಿದ್ದವರ ಕಣ್ಣುಗಳು ತೇವವಾದವು.
ಪೂರ್ಣಚಂದ್ರ ಮೈನಾಳೆ ನಿರ್ದೇಶನದಲ್ಲಿ ನೃತ್ಯಾಂಗನಾ ನಾಟ್ಯ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಲ್ಕು ವಚನ ನೃತ್ಯಗಳು ಸಭಿಕರ ಮನ್ನಣೆ ಪಡೆದವು.
ಠಾಣಾಕುಶನೂರದ ಸಿದ್ಧಲಿಂಗ ಸ್ವಾಮೀಜಿ, ಸಾಯಗಾಂವ್‍ನ ಶಿವಾನಂದ ಸ್ವಾಮೀಜಿ, ಹುಡಗಿಯ ಚನ್ನಮಲ್ಲದೇವರು ಸಮ್ಮುಖ ವಹಿಸಿದ್ದರು. ಕಲಬುರಗಿ ಜಿಲ್ಲಾ ಪಂಚಾಯಿತಿಯ ಯೋಜನಾಧಿಕಾರಿ ಶರಣಬಸವ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ ಮಠಪತಿ ಮತ್ತಿತರರು ಇದ್ದರು. ಅಭಿಷೇಕ ಮಠಪತಿ ಸ್ವಾಗತಿಸಿದರು.

ಗಮನ ಸೆಳೆದ ಅಕ್ಕನ ಐಕ್ಯ ಮಂಟಪ ಅಲಂಕಾರ
ಶರಣ-ಶರಣೆಯರ ಗೌರವ ಸಮರ್ಪಣೆಯ ಕೇಂದ್ರವಾದ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯ ಮಂಟಪವನ್ನು ಬಗೆ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತು. ಎರಡು ಕ್ವಿಂಟಲ್ ಹೂವುಗಳ ಅಲಂಕಾರ ಜನಮನ ಸೆಳೆಯುತ್ತಿತ್ತು. ಬಂದವರೆಲ್ಲ ಗೌರವ ಸಮರ್ಪಿಸಿ, ಐಕ್ಯ ಮಂಟಪದೆದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಸಾಗಿತ್ತು.

ಅನ್ನಪೂರ್ಣ ಯೋಜನೆ: ರೋಗಿಗಳಿಗೆ ಪ್ರಸಾದ
‘ಅನ್ನಪೂರ್ಣ’ ಯೋಜನೆಯಡಿ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ರೋಗಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು.
ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದ ಸವಿ ನೆನಪಿಗಾಗಿ ಲಿಂಗಾಯತ ಮಹಾ ಮಠ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಯಡಿ ಲಿಂಗಾಯತ ಮಹಾ ಮಠದ ವತಿಯಿಂದ ನಿರಂತರ ಪ್ರಸಾದ ವಿತರಣೆಗಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಮಠಕ್ಕೆ ರೂ. 6 ಲಕ್ಷದ ವಾಹನ ಕೊಡುಗೆಯಾಗಿ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3