ಫಲಿತಾಂಶ ಕುಸಿತ: ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ತರಾಟೆ
ಔರಾದ(ಬಿ) ಕ್ಷೇತ್ರದಲ್ಲಿ ಫಲಿತಾಂಶ ಕುಸಿದಿರುವುದಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಅದರಂತೆ ವಿದ್ಯಾರ್ಥಿಗಳು ಮತ್ತು ಪಾಠ ಮಾಡುವ ಶಿಕ್ಷಕರ ಮನೋಬಲ ಹೆಚ್ಚಿಸಲು ನಿರಂತರ ಪ್ರಯತ್ನಿಸುತ್ತಿದ್ದೇನೆ. ಈ ಭಾಗವಾಗಿ ಪ್ರತಿವರ್ಷ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ಶಾಲಾ-ಕಾಲೇಜುಗಳ ಸ್ಥಾಪನೆ, ವಸತಿ ನಿಲಯಗಳನ್ನು ನಿರ್ಮಿಸುತ್ತಿದ್ದು, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಆದರೂ ಫಲಿತಾಂಶ ಕುಸಿದಿರುವುದು ಸರಿಯಲ್ಲವೆಂದು ಕಳವಳ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೋಣೆ, ಕುಡಿಯುವ ನೀರು, ಟೇಬಲ್, ಬೆಂಚುಗಳು ಏನು ಬೇಕಾದರೂ ಒದಗಿಸುತ್ತೇನೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಆದರೆ ಶಿಕ್ಷಕರು ಮಾತ್ರ ಸರಿಯಾಗಿ ಕೆಲಸ ಮಾಡಬೇಕು. ಫಲಿತಾಂಶದಲ್ಲಿ ಸುಧಾರಣೆ ಆಗದಿದ್ದಲ್ಲಿ ಇನ್ನು ಮುಂದೆ ಸುಮ್ಮನಿರಲಾರೆ ಎಂದು ಎಚ್ಚರಿಸಿದರು.
ಗೈರು ಹಾಜರಾಗುವುದು, ಪಾಠ ಮಾಡದೇ ಸಮಯ ವ್ಯರ್ಥ ಮಾಡುವುದು, ಮದ್ಯಪಾನ ಮಾಡಿ ಶಾಲೆಗೆ ಹಾಜರಾಗುವುದು ಸೇರಿದಂತೆ ಸಾಕಷ್ಟು ದೂರುಗಳು ಕೆಲವು ಶಿಕ್ಷಕರ ಬಗ್ಗೆ ಪದೇ ಪದೇ ಕೇಳಿ ಬರುತ್ತಿವೆ. ಇಂಥವುಗಳನ್ನು ಬಿಟ್ಟು ಕೇವಲ ಕೆಲಸದ ಕಡೆ ಗಮನವಹಿಸಬೇಕು. ಪ್ರಮಾಣಿಕವಾಗಿ ಸೇವೆ ಸಲ್ಲಿಸುವುದಿದ್ದರೆ ಮಾತ್ರ ಇಲ್ಲಿರಬೇಕು. ಇಲ್ಲವಾದಲ್ಲಿ ಕೆಲಸ ಬಿಟ್ಟು ಹೋಗಬೇಕು ಎಂದರು.

ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಹೆಚ್ಚಿನ ಸಂಬಳ ಕೊಟ್ಟು ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಆದರೆ ಕೆಲವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಥವರಿಂದಾಗಿ ಫಲಿತಾಂಶ ಕುಸಿಯುತ್ತಿದೆ. ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕೆಂದು ಶಿಕ್ಷಕರಿಗೆ ತಿಳಿಸಿದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣ ಶಿಕ್ಷಕರಿಲ್ಲದಿರುವುದು ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ. ಇದನ್ನು ಸರಿಪಡಿಸಿ ಶಿಕ್ಷಕರು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಮನೆ-ಮನೆಗೆ ಭೇಟಿ ನೀಡಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತಗ್ಗುತ್ತಿದೆ. ಹಾಗಾಗಿ ಎಲ್ಲ ಶಿಕ್ಷಕರು ತಾವು ಕೆಲಸ ಮಾಡುವ ಗ್ರಾಮಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ದಾಖಲಾತಿ ಹೆಚ್ಚಿಸಲು ಮುಂದಾಗಬೇಕೆಂದು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಂಗೇಶ್, ಪ್ರಕಾಶ ರಾಠೋಡ ಸೇರಿದಂತೆ ಸರ್ಕಾರಿ ಶಾಲೆಗಳ ಮುಖ್ಯಗುರುಗಳು ಉಪಸ್ಥಿತರಿದ್ದರು.