ಜಗಜೀವನರಾಂ ಭವನಕ್ಕೆ: ರೂ. 5 ಕೋಟಿ ಅನುದಾನಕ್ಕೆ ಶಿಫಾರಸು
ಬೀದರ್: ಬೀದರ್‍ನಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ಒದಗಿಸುವಂತೆ ಪೌರಾಡಳಿತ ಸಚಿವ ರಹೀಂಖಾನ್ ಅವರು ಸಮಾಜ ಕಲ್ಯಾಣ ಸಚಿವರಿಗೆ ಶಿಫಾರಸು ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ ತಿಳಿಸಿದ್ದಾರೆ.
ತಮ್ಮ ಮನವಿಯ ಹಿನ್ನೆಲೆಯಲ್ಲಿ ಪೌರಾಡಳಿತ ಸಚಿವರು ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಭವನ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ನಗರದ ಹೊರವಲಯದ ಚಿಕ್ಕಪೇಟೆಯ ಸರ್ವೇ ಸಂಖ್ಯೆ 61 ರಲ್ಲಿ 1 ಎಕರೆ ಜಮೀನು ಒದಗಿಸಲಾಗಿದೆ. ಹಿಂದೆ ಭವನಕ್ಕೆ ಅನುದಾನ ಕೂಡ ಮಂಜೂರು ಮಾಡಲಾಗಿದ್ದು, ಅದರಲ್ಲಿ ರೂ. 50 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರೂ. 50 ಲಕ್ಷದಲ್ಲಿ ಭವನ ನಿರ್ಮಾಣ ಹಾಗೂ ಅದಕ್ಕೆ ಮೂಲಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಿದೆ. ಹೀಗಾಗಿ ದೀನ ದಲಿತರು, ಬಡವರ ಅನುಕೂಲಕ್ಕಾಗಿ ಭವನಕ್ಕೆ ರೂ. 5 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಕೋರಿದ್ದಾರೆ ಎಂದು ಹೇಳಿದ್ದಾರೆ.