ತಲೆ ಮೇಲೆ ವಚನ ಸಾಹಿತ್ಯ ಹೊತ್ತ ಬಸವಾನುಯಾಯಿಗಳು, ಗಮನ ಸೆಳೆದ ಶರಣರ ಭಾವಚಿತ್ರಗಳು
ವೈಭವದ ವಚನ ವಿಜಯೋತ್ಸವ ಪಥ ಸಂಚಲನ
ವೈಭವದ ವಚನ ವಿಜಯೋತ್ಸವ ಪಥ ಸಂಚಲನ
ಬೀದರ್: ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವ ನಿಮಿತ್ತ ಲಿಂಗಾಯತ ಮಹಾ ಮಠದ ವತಿಯಿಂದ ನಗರದಲ್ಲಿ ಶನಿವಾರ ವಚನ ವಿಜಯೋತ್ಸವ ಪಥ ಸಂಚಲನ ವೈಭವದಿಂದ ನಡೆಯಿತು.
ಪಾಪನಾಶ ಗೇಟ್‍ನಿಂದ ಆರಂಭಗೊಂಡ ಪಥ ಸಂಚಲನವು ಪಾಪನಾಶ ದೇಗುಲದ ಮೂಲಕ ಹಾಯ್ದು ಬಸವಗಿರಿಗೆ ತಲುಪಿ ಸಮಾರೋಪಗೊಂಡಿತು.

ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಹಸ್ರಾರು ಶರಣ- ಶರಣೆಯರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಶ್ರದ್ಧೆ, ಭಕ್ತಿಯಿಂದ ಸಾಗಿದರು.
ಅಲಂಕೃತ 10 ಆಟೊಗಳ ಮೇಲೆ ಬಸವಣ್ಣ, ಅಕ್ಕ ಮಹಾದೇವಿ, ಅಕ್ಕ ಅನ್ನಪೂರ್ಣತಾಯಿ, ಮಡಿವಾಳ ಮಾಚಿದೇವ, ಅಲ್ಲಮಪ್ರಭು ದೇವರು, ಮೊಳಿಗೆ ಮಾರಯ್ಯ, ಹರಳಯ್ಯ, ಕಲ್ಯಾಣಮ್ಮ, ನೂಲಿಯ ಚಂದಯ್ಯ ಮೊದಲಾದವರ ಭಾವಚಿತ್ರಗಳನ್ನು ಇಡಲಾಗಿತ್ತು.
ಪ್ರಭುದೇವ ಸ್ವಾಮೀಜಿ ಸ್ವತಃ ತಲೆ ಮೇಲೆ ಲಿಂಗಾಯತ ಧರ್ಮಗ್ರಂಥ ಗುರುವಚನ ಹೊತ್ತು ಮುಂಚೂಣಿಯಲ್ಲಿ ಸಾಗಿದ್ದು ನೆರೆದವರ ಉತ್ಸಾಹ ಇಮ್ಮಡಿಗೊಳಿಸಿತು. ಷಟ್‍ಸ್ಥಲ ಧ್ವಜಗಳು, ಛತ್ರಿ, ಚಾಮರಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು. ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಅಕ್ಕ ಅನ್ನಪೂರ್ಣತಾಯಿ ಅವರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.
ಪಥ ಸಂಚಲನಕ್ಕೆ ಧಾರವಾಡದ ಡಾ. ಬಸವಾನಂದ ಸ್ವಾಮೀಜಿ ವಚನ ಓದಿಸುವ ಮೂಲಕ ಚಾಲನೆ ನೀಡಿದರು. ಪಥ ಸಂಚಲನವು ಹನ್ನೆರಡನೆಯ ಶತಮಾನದಲ್ಲಿ ವಚನ ಸಾಹಿತ್ಯ ರಕ್ಷಣೆಗೆ ಶರಣರು ಕಾಡಿನಲ್ಲಿ ಸಂಚರಿಸಿದಂತಹ ಅನುಭವ ನೀಡಿತು.