ಮೇ 25 ರಂದು ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ಗ್ರಾಮೀಣ ಬಡ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಮವಸ್ತ್ರ ವಿತರಣೆ: ರಾಂಪುರೆ
ಬೀದರ್: ಮೇ. 25 ರಂದು ಭಾನುವಾರ ಮ. 12 ಗಂಟೆಗೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಬುದ್ಧಿಷ್ಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ರಾಂಪೂರೆ ಫೌಂಡೇಶನ್ ವತಿಯಿಂದ ಗ್ರಾಮೀಣ ಬಡ ಮಹಿಳೆಯರಿಗೆ ಉಚಿತ ಶಿಕ್ಷಣ ಮತ್ತು ಅನಾಥ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದು ಬುದ್ಧಿಷ್ಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ರಾಂಪುರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಬುದ್ಧಿಷ್ಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ರಾಂಪೂರೆ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದೆ. 2025 ರಿಂದ ಈ ಯೋಜನೆ ಆರಂಭಿಸಲಾಗಿದೆ. ಶಾಲೆ ಉಳಿಯುವವರೆಗೆ ಜಾತಿ ಧರ್ಮ ಮತಭೇದ ರಹಿತವಾಗಿ ಈ ಯೋಜನೆ ಜಾರಿಗೆ ತರುತ್ತೇವೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಬಹುತೇಕ ಕನ್ನಡ ಪರ, ದಲಿತಪರ, ವಿದ್ಯಾರ್ಥಿ ಪರ, ಗೊಂಡಪರ ಸಂಘಟನೆಗಳು ಸೇರಿದಂತೆ ಹಲವರ ಸಹಕಾರವಿದೆ.

ದಿವ್ಯ ಸಾನಿಧ್ಯವನ್ನು ಭಾಲ್ಕಿಯ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು, ದಿವ್ಯ ನೇತೃತ್ವ ಆಣದೂರಿನ ಪೂಜ್ಯ ಜ್ಞಾನಸಾಗರ ಭಂತೆ ವಹಿಸುವರು. ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೆರವೇರಿಸುವರು. ಅಧ್ಯಕ್ಷತೆಯನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್ ವಹಿಸುವರು. ಘನ ಉಪಸ್ಥಿತಿಯನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಉದಗೀರ ಶಾಸಕ ಸಂಜಯ್ ಬನಸೋಡೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಸಾಗರ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳು, ಸಾಹಿತಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪ್ರಮುಖರಾದ ಚರಣದೀಪ ಆಣದೂರೆ, ಅನೀಲ ಚಿಂಚೋಳೆ, ಶ್ರೀಕಾಂತ ಭವಾನಿ, ಧನರಾಜ ಜಿ., ದಿನೇಶ ಸೋನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.