ಶಾಲಾ, ಕಾಲೇಜು ದುಬಾರಿ ಶುಲ್ಕ: ಕರ್ನಾಟಕ ರಕ್ಷಣಾ ವೇದಿಕೆ ಧರಣಿ
ಅನಧಿಕೃತ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಅನಧಿಕೃತ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೀದರ್: ನಗರದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‍ಗಳು ಹಾಗೂ ಅಧಿಕ ಶುಲ್ಕ ಪಡೆಯುತ್ತಿರುವ ಖಾಸಗಿ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸೊಮನಾಥ ಮುಧೋಳ ನೇತೃತ್ವದಲ್ಲಿ ಧರಣಿ ನಡೆಸಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಬಂದ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಅವರಿಗೆ ಸಲ್ಲಿಸಿದರು.
ನಗರದ ಚಿದ್ರಿ ರಸ್ತೆಯಲ್ಲಿ ಇರುವ ಹನುಮಾನ ನಗರದಲ್ಲಿ ಫಿಜಿಕ್ಸ್ ವಾಲಾ ವಿದ್ಯಾಪೀಠ ಪಾಠಶಾಲಾ ಕೋಚಿಂಗ್ ಸೆಂಟರ್ ಅನಧಿಕೃತವಾಗಿ ನಡೆಸಲಾಗುತ್ತಿದೆ. ಬೇರೆ ಬೇರೆ ಕಾಲೇಜುಗಳ ಹೆಸರಲ್ಲಿ ದಾಖಲಾತಿ ಮಾಡಿಸಿಕೊಂಡು, ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು, ಆನ್‍ಲೈನ್, ಆಫ್‍ಲೈನ್ ಕೋಚಿಂಗ್ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಬನ್ಸಾಲ್ ಹಾಗೂ ಆಕಾಶ್ ಕೋಚಿಂಗ್ ಸೆಂಟರ್ ಹೆಸರಲ್ಲಿಯೂ ದಾಖಲಾತಿ ಮಾಡಿಸಿಕೊಂಡು ನೂರಾರು ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ ಎಂದು ಆಪಾದಿಸಿದರು.
ಬನ್ಸಾಲ್ ಹಾಗೂ ಆಕಾಶ್ ಕೋಚಿಂಗ್ ಸೆಂಟರ್ ಹೆಸರಲ್ಲಿಯೂ ದಾಖಲಾತಿ ಮಾಡಿಸಿಕೊಂಡು ನೂರಾರು ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ ಎಂದು ಆಪಾದಿಸಿದರು.

ಅಧಿಕೃತ ಕಾಲೇಜುಗಳು ಸಹ ನೀಟ್, ಕೆಸಿಇಟಿ, ಜೆಇಇ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ವರ್ಷಕ್ಕೆ ರೂ. 1.50 ಲಕ್ಷದಿಂದ ರೂ. 2 ಲಕ್ಷ ದವರೆಗೆ ಶುಲ್ಕ ವಸೂಲಿ ಮಾಡುತ್ತಿವೆ ಎಂದು ದೂರಿದರು.
ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ಪಡೆಯುತ್ತಿರುವುದರಿಂದ ಮಕ್ಕಳ ಶಿಕ್ಷಣ ಪಾಲಕರಿಗೆ ಹೊರೆಯಾಗಿದೆ. ಶುಲ್ಕ ಕಟ್ಟಲು ವಿಳಂಬ ಮಾಡಿದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಘಟನೆಗಳೂ ನಡೆಯುತ್ತಿವೆ ಎಂದು ದೂರಿದರು.
ಅಧಿಕಾರಿಗಳು ಕೂಡ ಕೋಚಿಂಗ್ ಸೆಂಟರ್ ಮಾಫಿಯಾ ಜತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.
ಹೆಚ್ಚು ಶುಲ್ಕ ಪಡೆಯುತ್ತಿರುವ ಕಾಲೇಜುಗಳು ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಶಾಲಾ, ಕಾಲೇಜುಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನುಮತಿ ಇಲ್ಲದೆ ನಡೆಸುತ್ತಿರುವ ಫಿಜಿಕ್ಸ್‍ವಾಲಾ, ಬನ್ಸಾಲ್ ಹಾಗೂ ಆಕಾಶ್ ಕೋಚಿಂಗ್ ಸೆಂಟರ್‍ಗಳನ್ನು ನಾಳೆಯೇ ಬಂದ್ ಮಾಡಿಸಲಾಗುವುದು ಎಂದು ಚಂದ್ರಕಾಂತ ಶಹಾಬಾದಕರ್ ಭರವಸೆ ನೀಡಿದರು ಎಂದು ಸೋಮನಾಥ ಮುಧೋಳ ತಿಳಿಸಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್, ಶಿವರುದ್ರ ಕೀರ್ತಾ, ವಿಜಯಕುಮಾರ ಅಷ್ಟೂರೆ, ಮಲ್ಲು ಸಿಕೇನಪುರ, ಸಚಿನ್ ಬೆನಕನಳ್ಳಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಂಡೆಪ್ಪ ಕರಬಸಣ್ಣ, ಬೀದರ್ ನಗರ ಘಟಕದ ಅಧ್ಯಕ್ಷ ಶಿವಕುಮಾರ, ಕಮಲನಗರ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಮುಖಂಡರಾದ ಮಲ್ಲಪ್ಪ ಚಡಪಳ್ಳಿ, ವಿವೇಕ ನಿರ್ಮಳೆ, ಜಮೀರ್ ಬಗದಲ್, ನಾಗೇಶ ಮನ್ನಳ್ಳಿ, ದಯಾನಂದ ವೀರಶೆಟ್ಟೆ, ಕರಬಸಪ್ಪ ವೀರಶೆಟ್ಟೆ, ಪ್ರತಯ್ಯ ಸ್ವಾಮಿ, ಪ್ರಶಾಂತ ಖಾನಾಪುರೆ, ಅಯೂಬ್ ಖುರೇಷಿ, ಇರ್ಷಾದ್ ಮತ್ತಿತರರು ಪಾಲ್ಗೊಂಡಿದ್ದರು.