ಅಲ್ಲಮಪ್ರಭು ನಗರದಲ್ಲಿ 892ನೇ ಬಸವ ಜಯಂತಿ ಆಚರಣೆ
ಬೀದರ್: ಬಸವಾದಿ ಶರಣರು ಒಂದು ಜಾತಿಗೆ ಸೀಮಿತರಲ್ಲ. ಅದಕ್ಕಾಗಿಯೇ ವಿಶ್ವಗುರು ಬಸವಣ್ಣನವರನ್ನು ಜಗಜ್ಯೋತಿ ಎಂದು ಕರೆಯುತ್ತಾರೆ. ಜಾತಿ ನಿರ್ಮೂಲನೆ ಮಾಡಿ ಜ್ಯೋತಿ ತತ್ವ ಜಗತ್ತಿನಲ್ಲಿ ಸಾರಿದವರು ಬಸವಾದಿ ಶರಣರು ಎಂದು ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನುಡಿದರು.
ನಗರದ ಅಲ್ಲಮಪ್ರಭು ನಗರದ ಉದ್ಯಾನದಲ್ಲಿ ಜರುಗಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಉತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಶ್ವದ ಮೊಟ್ಟಮೊದಲ ಅನುಭವ ಮಂಟಪವೆಂಬ ಮೊದಲ ಪಾರ್ಲಿಮೆಂಟಿನ ಪ್ರಥಮ ಲೋಕಸಭಾ ಸ್ಪೀಕರ್ ಅಲ್ಲಮಪ್ರಭುದೇವರಾಗಿದ್ದರು. ಪ್ರತಿದಿನ ವಚನಗಳ ಬರೆದು ಚರ್ಚಿಸುತಿದ್ದರು. ಶರಣರು ಒಂದು ಜಾತಿಗೆ ಸೀಮಿತರಲ್ಲ. ಅವರ ಸಂದೇಶಗಳು ಸಾರ್ವಕಾಲಿತ ಸತ್ಯವನ್ನು ಸಾರುತ್ತವೆ. ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ತಿಳಿಸುವ ಕಾರ್ಯ ಎಲ್ಲಾ ಪಾಲಕರು ಮಾಡಬೇಕು. ಬಸವ ತತ್ವ ಉಳಿಯದಿದ್ದರೆ ಯಾರಿಗೂ ಉಳಿವಿಲ್ಲ. ಜಾಗತಿಕ ಸಮಸ್ಯೆಗಳಿಗೆ ಬಸವಾದಿ ಶರಣರ ವಚನಗಳೇ ಪರಿಹಾರವಾಗಿವೆ ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಬಿಜೆಪಿ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮಾದರಿಯಲ್ಲಿ ನಮ್ಮ ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ ಎಂದು ವಿಶ್ವದ ತುಂಬಾ ಹೇಳುತ್ತಾರೆ. ಅಂತಹ ಶರಣರು ಕಾಯಕ ಮಾಡಿ, ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದ ಪವಿತ್ರ ನೆಲದಲ್ಲಿ ನಾವು ಜೀವನ ಸಾಗಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಕ್ಷೇತ್ರದ ಎಲ್ಲಾ ಜನಾಂಗದವರ ಜೊತೆ ಸಹಪಂಕ್ತಿ ಭೋಜನ ಮಾಡಿ ಶರಣ ತತ್ವ ಅಳವಡಿಸಿಕೊಂಡಿದ್ದೇನೆ ಎಂದರು.
ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅಲ್ಲಮಪ್ರಭು ಓಣಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ ಎಂದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿದರು.
ಅಧ್ಯಕ್ಷತೆಯನ್ನು ಓಣಿಯ ಮುಖಂಡರಾದ ನೂರಂದಪ್ಪ ಗಿರಿ ವಹಿಸಿದ್ದರು. ಕೆ.ಎ.ಎಸ್. ಪಾಸಾದ ಓಣಿಯ ಯುವಕ ಶಿವಕುಮಾರ ಮನೋಹರ ಸ್ವಾಮಿ ಹಾಗೂ ಐಐಟಿ ಪಾಸಾದ ರಾಹುಲ ಚಂದ್ರಕಾಂತ ಪಟ್ನೆ ಅವರನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಬುಕ್ಕಾ ದಂಪತಿಗಳು ಬಸವಪೂಜೆ ನೆರವೇರಿಸಿದರು. ಶ್ರೀನಾಥ ಕೋರೆ, ಅಕ್ಕಮಹಾದೇವಿ ಸ್ವಾಮಿ ವಚನ ಗಾಯನ ಮಾಡಿದರು. ಬಸವಕುಮಾರ ಚಟನಳ್ಳಿ ಪ್ರಾರ್ಥಿಸಿದರು. ಕೀರ್ತಿ ಘೂಳೆ ವಚನ ನೃತ್ಯ ಮಾಡಿದರು. ಚಂದ್ರಕಾಂತ ಪಟ್ನೆ ಸ್ವಾಗತಿಸಿದರು. ಸುಜೀತಕುಮಾರ ಬಿ ನಿರೂಪಿಸಿದರೆ ಶಶಿಧರ ಹೊಸದೊಡ್ಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಭೀಮರಾವ ಪೋ.ಪಾಟೀಲ, ವೀರಶೆಟ್ಟಿ ಗಣಾಪುರ, ಚಂದ್ರಶೇಖರ ಸ್ವಾಮಿ, ಶಿವರಾಜ ಪಟ್ನೆ, ಚಂದ್ರಶೇಖರ ರೆಡ್ಡಿ, ಬಸಯ್ಯ ಸ್ವಾಮಿ, ರಾಜಕುಮಾರ ಸ್ವಾಮಿ, ಗಣಪತಿ ಬಿರಾದಾರ, ಗಣಪತರಾವ ಗುಡುರೆ, ಈಶ್ವರಮ್ಮ ಪಾಟೀಲ ಸೇರಿದಂತೆ ಹಲವರಿದ್ದರು. ಕೊನೆಯಲ್ಲಿ ಓಣಿಯ ಶರಣ ಶರಣೆಯರಿಂದ ಆಕರ್ಷಕ ಸಾಂಪ್ರದಾಯಿಕ ಕೋಲಾಟ ನೆರವೇರಿತು.