ಬೀದರ್ : ಇಂದಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಕಲಿಕೆಯು ಅತ್ಯಂತ ಮುಖ್ಯವಾಗಿದ್ದು, ತಾಂತ್ರಿಕ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾಮಾಜಿಕ ಕಾಳಜಿಯ ದ್ಯೋತಕವಾಗಿ ನೀಡಲಾಗಿದೆ ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಪಿ. ಸಿದ್ದಪ್ಪ ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೂ.1,25,000/- ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಅವರ ಅಣ್ಣ ದಿವಂಗತ ಪಿ.ಸಂಗಪ್ಪ ಅವರ ಸ್ಮರಣಾರ್ಥ ದಾನರೂಪದಲ್ಲಿ ನೀಡಿ, ಕುಡಿಯುವ ನೀರಿನ ಘಟಕವನ್ನು ಕಾಲೇಜಿನವರು ಸರಿಯಾಗಿ ನಿರ್ವಹಿಸಬೇಕು, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿ, ನಿವೃತ್ತ ಉಪನ್ಯಾಸಕ ಹಾಗೂ ನಿವೃತ್ತ ಹೋಂಗಾರ್ಡ ಕಮಾಂಡೆAಟ್ ಮೊಹ್ಮದ ನಯಿಮುದ್ದೀನ್ ಅವರು ಮಾತನಾಡಿ, ಪಿ. ಸಿದ್ದಪ್ಪ ಅವರಂತಹ ದಾಸೋಹಿಗಳಿರುವುದು ನಿಜಕ್ಕೂ ಹೆಮ್ಮೆ ತಂದಿದೆ. ಸಮಾಜಕ್ಕೆ ಇಂತಹವರ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಕುಡಿಯುವ ನೀರಿನ ಘಟಕದ ಸದುಪಯೋಗವನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಜಿಲ್ಲೆಯಲ್ಲಿರುವ ದಾನಿಗಳು ಇಂತಹ ಸತ್ಕಾರ್ಯಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಜಯಕುಮಾರ ಎಸ್. ಜಾಧವ ಅವರು ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ಮೂಲಭೂತ ಸೌಕರ್ಯಗಳಿಗಾಗಿ ಸಹಾಯ ಮಾಡಲು ಮುಂದೆ ಬರಬೇಕೆಂದರು.
ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ ಪಿ. ಸಿದ್ದಪ್ಪ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಕುಲಸಚಿವರಾದ ಶೇಖ್ ಸಿರಾಜೋದ್ದಿನ್ ಉಪಸ್ಥಿತರಿದ್ದರು.
ಸಂಸ್ಥೆಯ ಎನ್.ಎಸ್.ಎಸ್.ಸಂಯೋಜನಾಧಿಕಾರಿ ಅರುಣ ಮೊಕಾಶಿ ನಿರೂಪಿಸಿದರು. ಅಲುಮಿನಿ ಸಂಘದ ಕಾರ್ಯದರ್ಶಿ ಗೌತಮ ಹೊಸಮನಿ ಸ್ವಾಗತಿಸಿದರು, ವಕೀಲ್ ಎಂ.ಪಟೇಲ್ ವಂದಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.