ಬೀದರ್ : ಕರ್ನಾಟಕ ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ರಿಂದ 10 ಎಕರೆ ಜಮಿನಿನಲ್ಲಿ ಕಿರು ಅರಣ್ಯ ಅಥವಾ ಕಿರು ಪಕ್ಷಿಧಾಮ ಅಭಿವೃದ್ದಿ ಪಡಿಸಬೇಕೆಂದು ಪರಿಸರ ಪ್ರೇಮಿ ಮಹಲಿಂಗಯ್ಯ ತುಮಕೂರ್ ಅವರು ಸೈಕಲ್ ಜಾಥಾ ಮೂಲಕ ಬೀದರ ಜಿಲ್ಲೆಗೆ ಆಗಮಿಸಿ ಇಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶಿಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಾಗತೀಕ ತಾಪಮಾನ ಏರಿಕೆಯಿಂದಾಗಿ ಗಾಳಿ, ನೀರು ಮತ್ತು ಇತರ ರೀತಿಯ ಮಾಲಿನ್ಯಗಳು ಪರಿಸರ ಮತ್ತು ಜೀವಿಗಳಿಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಪ್ರಾಣಿ-ಪಕ್ಷಿಗಳು ಸೇರಿದಂತೆ ಸಕಲ ಜೀವ ರಾಶಿಗಳಿಗೆ ಆರೋಗ್ಯ ಹಾನಿಕರವಾಗಿರುತ್ತಿವೆ. ಪರಿಸರ ಸಂರಕ್ಷಣೆಗೆ ಮೂಲಭೂತ ಸ್ಥಾನಮಾನ ನೀಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 5 ರಿಂದ 10 ಎಕರೆ ಜಮೀನಿನಲ್ಲಿ ಕಿರು ಅರಣ್ಯ ಅಥವಾ ಕಿರು ಪಕ್ಷಿಧಾಮ ನಿರ್ಮಾಣ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿ ಜಾರಿಗೆ ತಂದು ಅಭಿವೃದ್ದಿ ಪಡಿಸಬೇಕು ಮತ್ತು ರಾಜ್ಯದ ಪ್ರತಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಪಡಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ರೈತ ಮುಖಂಡ ಬಸವರಾಜ ಅಷ್ಟೂರೆ, ಪತ್ರಕರ್ತ ಚಂದ್ರಕಾಂತ ಹಳ್ಳಿಖೇಡಕರ್, ವಿಜಯಕುಮಾರ ಭಂಡೆ, ಸೇರಿದಂತೆ ಮತ್ತಿತರರು ಇದ್ದರು.