ಬೀದರ್: ಆರು ವರ್ಷದ ಒಳಗಿನ ಮಕ್ಕಳಿಗಾಗಿ ರೋಟರಿ ಕ್ಲಬ್ ಬೀದರ್ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಸೈಕಲ್ ತುಳಿಯುವ ಸ್ಪರ್ಧೆಯಲ್ಲಿ ಬೆಂಗಳೂರು ಎಜುಕೇಷನ್ ಸೆಂಟರ್‍ನ ನಕ್ಷ ಶಿವಕುಮಾರ ಪ್ರಥಮ ಸ್ಥಾನ ಗಳಿಸಿದರು.
ನ್ಯಾಷನಲ್ ಸ್ಕೂಲ್‍ನ ವರುಣ್ ದ್ವಿತೀಯ ಹಾಗೂ ಅದೇ ಶಾಲೆಯ ಆಯುಷ್ ತೃತೀಯ ಸ್ಥಾನ ಪಡೆದರು.
ಪ್ರಥಮ ಬಹುಮಾನವಾಗಿ ಸೈಕಲ್, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ರೂ. 2,100 ಹಾಗೂ ರೂ. 1,100 ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 40 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಒಂದು ತಾಸು ಸೈಕಲ್ ತುಳಿಯಿರಿ: ನಿತ್ಯ ಕನಿಷ್ಠ ಒಂದು ತಾಸು ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.

ಸೈಕಲ್ ತುಳಿಯುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈಚಿನ ದಿನಗಳಲ್ಲಿ ಸೈಕಲ್ ಬಳಕೆ ಕಡಿಮೆಯಾಗಿದೆ. ನಿತ್ಯ ಸೈಕಲ್ ತುಳಿಯುವುದನ್ನು ರೂಢಿಸಿಕೊಂಡರೆ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ ತಿಳಿಸಿದರು.
ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲು ಕ್ಲಬ್‍ನಿಂದ ಪ್ರತಿ ವರ್ಷ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ಪರ್ಧೆ ಏರ್ಪಡಿಸುತ್ತ ಬರಲಾಗಿದೆ. ಈ ವರ್ಷ ಮೊದಲ ಬಾರಿಗೆ 6 ವರ್ಷದ ಒಳಗಿನ ಮಕ್ಕಳಿಗೆ ದಿಲೀಪ್ ಸೈಕಲ್ ಸ್ಟೋರ್ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.
ಕ್ರೀಡೆಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಮೊಬೈಲ್‍ನಿಂದ ಆದಷ್ಟು ದೂರವಿರಿಸಿ, ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸಲಹೆ ಮಾಡಿದರು.
ಹಿರಿಯ ಎಂಜಿನಿಯರ್‍ಗಳಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಅನಿಲಕುಮಾರ ಔರಾದೆ, ಡಾ. ಕಾಮತಿಕರ್, ವಿಲಾಸರಾವ್ ಮೋರೆ, ನರೇಂದ್ರ ಸಾಂಘವಿ, ಡಾ. ಸುರೇಶ ಪಾಟೀಲ, ಭಗವಂತಪ್ಪ, ಅನಿಲಕುಮಾರ ಬಿರಾದಾರ, ಸುಧಾಕರ ರೆಡ್ಡಿ, ಅಭಿನವ ಗಾದಾ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗೇಂದ್ರ ನಿಟ್ಟೂರೆ, ಅಮರನಾಥ ಡೊಳ್ಳಿ ಉಪಸ್ಥಿತರಿದ್ದರು.
ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ಸ್ವಾಗತಿಸಿದರು. ಪ್ರೊ. ಚನ್ನಪ್ಪಗೌಡ ನಿರೂಪಿಸಿದರು. ಕೋಶಾಧ್ಯಕ್ಷ ಅನಿಲಕುಮಾರ ಮಸೂದಿ ವಂದಿಸಿದರು.