ಬೀದರ್: ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗತ್ಪಾದರ ಪಟ್ಟಾಭಿಷೇಕದ ರಜತ ಮಹೋತ್ಸವ ಅಂಗವಾಗಿ ಮಹಾರಾಷ್ಟ್ರದ ನಾಂದೇಡ್‍ನಲ್ಲಿ ಡಿಸೆಂಬರ್‍ನಲ್ಲಿ ಹಮ್ಮಿಕೊಂಡಿರುವ ಮಹಾ ರುದ್ರಯಾಗ, ಯಜ್ಞ ಹಾಗೂ ಸರ್ವ ಧರ್ಮ ಪರಿಷತ್‍ನ ಭಿತ್ತಿಪತ್ರವನ್ನು ನಗರದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಭಿತ್ತಿಪತ್ರ ಬಿಡುಗಡೆಗೊಳಿಸಿದ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗತ್ಪಾದರು, ಸದ್ಯ ವಿಶ್ವದಲ್ಲಿ ಅಶಾಂತಿ ಹಾಗೂ ಮೂರನೇ ಮಹಾ ಯುದ್ಧದ ಸನ್ನಿವೇಶ ಎದುರಾಗಿದೆ. ಹೀಗಾಗಿ ವಿಶ್ವ ಶಾಂತಿ ಹಾಗೂ ಸಕಲರ ಕಲ್ಯಾಣಕ್ಕಾಗಿ ಡಿಸೆಂಬರ್ 1 ರಿಂದ 8 ರ ವರೆಗೆ ನ್ಯೂ ನಾಂದೇಡ್‍ನ ಗೋಪಾಳ ಚೌಡಿಯ ಭೀಮಾಶಂಕರ ನಗರದಲ್ಲಿರುವ ಶ್ರೀ ಗುರು ದೇಶಮುಖ ಆಶ್ರಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂಟು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಗದ್ಗುರುಗಳು, ಸಂತರು, ಮಹಾ ಪುರುಷರು, ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಪಂಚ ಪೀಠಗಳು ಹಾಗೂ ಅವುಗಳ ಅಧೀನದ 8 ಸಾವಿರ ಮಠಗಳು ಸನಾತನ ಸಂಸ್ಕøತಿ, ವೀರಶೈವ ಲಿಂಗಾಯತ ಪರಂಪರೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿವೆ. ಭಕ್ತರ ಕಲ್ಯಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿವೆ. ಜಗದ್ಗುರು ಪಂಚಾಚಾರ್ಯರ ತತ್ವಾದರ್ಶಗಳನ್ನು ಜಗತ್ತಿಗೆ ಬೋಧಿಸುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಎಂಟು ದಿನಗಳ ಅವಧಿಯಲ್ಲಿ ದೇಶ, ವಿದೇಶದ ಒಂದೂವರೆ ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ನಾಂದೇಡ್ ಕಾರ್ಯಕ್ರಮ ಇತಿಹಾಸದಲ್ಲಿ ದಾಖಲಾಗುವ ಕಾರ್ಯಕ್ರಮ ಆಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು, ಚಿಂತಕರು, ವೀರಶೈವ ಲಿಂಗಾಯತರು ಸೇರಿದಂತೆ ಸರ್ವ ಸಮಾಜದವರು ಭಾಗವಹಿಸಲಿದ್ದಾರೆ. ಜಿಲ್ಲೆ ಹಾಗೂ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಜಗದ್ಗುರುಗಳು ಹಾಗೂ ಇತರ ಮಠಾಧೀಶರ ದರ್ಶನಾಶೀರ್ವಾದ ಪಡೆಯಬೇಕು ಎಂದು ಕೋರಿದರು.
ಪ್ರಮುಖರಾದ ವರದಯ್ಯ ಸ್ವಾಮಿ, ಮಹೇಶ ಪಾಟೀಲ, ನಾಗರಾಜ ಮಠ, ಪ್ರವೀಣ್ ಸ್ವಾಮಿ, ರಾಜಕುಮಾರ ಬಿರಾದಾರ, ಶಿವಶಂಕರ ಬೆಮಳಗಿ, ರೇವಣಸಿದ್ದ ಮಠಪತಿ, ಸಂಜೀವಕುಮಾರ ಸ್ವಾಮಿ, ಸಚಿನ್ ಮಠಪತಿ, ಶ್ರೀಕಾಂತ ಹೊನ್ನಿಕೇರಿ ಮತ್ತಿತರರು ಇದ್ದರು.